ADVERTISEMENT

ತ್ಯಾಗ, ಸೇವೆಯ ಪ್ರತೀಕ ಸಿದ್ಧಗಂಗಾ ಶ್ರೀ: ಸಂಸದ ರಾಘವೇಂದ್ರ

ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಸಂಸದ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:27 IST
Last Updated 25 ಮೇ 2022, 2:27 IST
ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ನೇತೃತ್ವದಲ್ಲಿ ಮಂಗಳವಾರ ಜರುಗಿದ ಸಿದ್ಧಗಂಗಾ ಶ್ರೀ ಅವರ 115ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಿ.ಕೆ. ಸಂಗಮೇಶ್ವರ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಇದ್ದರು.
ಭದ್ರಾವತಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ನೇತೃತ್ವದಲ್ಲಿ ಮಂಗಳವಾರ ಜರುಗಿದ ಸಿದ್ಧಗಂಗಾ ಶ್ರೀ ಅವರ 115ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಿ.ಕೆ. ಸಂಗಮೇಶ್ವರ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಇದ್ದರು.   

ಭದ್ರಾವತಿ: ನಡೆದಾಡುವ ದೇವರು ಎಂದು ಖ್ಯಾತಿ ಪಡೆದಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆದರ್ಶ, ತ್ಯಾಗ, ಸೇವೆಯ ಪ್ರತೀಕ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರದಲ್ಲಿ ಗಂಗೆ ಇರುವ ರೀತಿಯಲ್ಲಿ ದಕ್ಷಿಣದಲ್ಲಿ ಸಿದ್ಧಗಂಗೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ ರೀತಿಯಲ್ಲಿ ಸಿದ್ಧಗಂಗಾ ಕ್ಷೇತ್ರದ ಸಾಧನೆ ಇಡೀ ವಿಶ್ವದ ಆಧ್ಯಾತ್ಮಿಕ ಭೂಪಟಕ್ಕೆ ಅನುಕರಣೀಯ ಎಂದು ಹೇಳಿದರು.

ADVERTISEMENT

ತ್ರಿವಿಧ ದಾಸೋಹ ಸಂಸ್ಕೃತಿ ಬೆಳೆಸಿದ ಸಿದ್ಧಗಂಗಾಶ್ರೀ ಅವರು ಮನುಷ್ಯ ನೀತಿಸಂಹಿತೆ ರೂಪಿಸಿದ ಮಹಾನ್ ಮಾನವತಾವಾದಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.

ವಿವೇಕ, ಸಂಸ್ಕೃತಿ, ವಿನಯತೆ ಮೂಲಕ ಸಮಗ್ರ ರಾಷ್ಟ್ರೀಯತೆ ಚಿಂತನೆಯನ್ನು ವಿದ್ಯಾರ್ಥಿ ಸಮೂಹದಲ್ಲಿ ಬಿತ್ತುವ ಕೆಲಸವನ್ನು ಶಿವಕುಮಾರ ಸ್ವಾಮೀಜಿ ಮಾಡಿದರು. ಅದರ ಪರಿಣಾಮವಾಗಿ ಇಂದು ಇಡೀ ವಿಶ್ವದಲ್ಲಿ ಸಿದ್ಧಗಂಗಾ ಶಿಷ್ಯವೃಂದ ನೆಲೆಕಂಡಿದೆ. ಈ ಮೂಲಕ ಸಾಮಾಜಿಕ ಬದಲಾವಣೆ ಕೆಲಸ ನಡೆದಿದೆ ಎಂದರು.

ಸ್ವಾಮೀಜಿ ಅವರ ಬದುಕು ಪೂರ್ತಿಯಾಗಿ ಜನಹಿತದ ಚಿಂತನೆಯಿಂದ ಕೂಡಿತ್ತು. ಅದರ ಪರಿಣಾಮವಾಗಿ ವಿದ್ಯಾರ್ಜನೆ ಮೂಲಕ ದಾಸೋಹ ಉಣಬಡಿಸಿದರು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ‘ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳುವ ಶಿಕ್ಷಣವನ್ನು ನೀಡಿದ ಶಿವಕುಮಾರ ಸ್ವಾಮೀಜಿ ಅವರ ಚಿಂತನೆ ಎಲ್ಲರಿಗೂ ಮಾದರಿ. ಧರ್ಮದ ಸಾರವನ್ನು ಬದುಕಿನಲ್ಲಿ ಕಟ್ಟಿಕೊಡುವ ಕೆಲಸ ಮಾಡಿದ ಅವರು ಕೆಲಸ ಮಾನವ ಕುಲಕ್ಕೆ ಶಾಂತಿ ತುಂಬುವಂತೆ ಮಾಡಿದೆ’ ಎಂದರು. ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು, ನಗರಸಭಾ ಸದಸ್ಯ ಬಿ.ಕೆ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಕೆ.ಎಚ್. ತೀರ್ಥಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂದಿನಿ ಮಲ್ಲಿಕಾರ್ಜುನ್ ತಂಡದಿಂದ ಪ್ರಾರ್ಥನೆ ನಡೆಯಿತು. ಕೆ.ಎಚ್. ತೀರ್ಥಯ್ಯ ಸ್ವಾಗತಿಸಿದರು. ಅಡವೀಶಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಿ.ಜಿ. ಧನಂಜಯ ನಿರೂಪಿಸಿದರು. ಬಿ.ಎಸ್. ಮಹೇಶಕುಮಾರ್, ಪರಮೇಶ್ವರ್ ಪರಿಚಯ ಮಾಡಿಕೊಟ್ಟರು.

ನಂದಿ ವಿಗ್ರಹ ಉದ್ಘಾಟನೆ

ನಗರಸಭೆ ವತಿಯಿಂದ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಿರ್ಮಿಸಿರುವ ಬೃಹತ್ ನಂದಿ ವಿಗ್ರಹ ಉದ್ಘಾಟನೆಯನ್ನು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.