ADVERTISEMENT

ತುಮರಿ | ಬಸ್‌ ಕಾಣದ ಗ್ರಾಮಗಳು; ಗ್ರಾಮಸ್ಥರ ಗೋಳು ಕೇಳುವವರಿಲ್ಲ..

ಕರೂರು ಹೋಬಳಿಯ ಹಲವು ಗ್ರಾಮಗಳಲ್ಲಿ ಬಸ್‌ ಸೌಲಭ್ಯ ಮರೀಚಿಕೆ

ಪ್ರಜಾವಾಣಿ ವಿಶೇಷ
Published 5 ಆಗಸ್ಟ್ 2024, 6:07 IST
Last Updated 5 ಆಗಸ್ಟ್ 2024, 6:07 IST
ಬಸ್ ಸೇವೆ ಇಲ್ಲದ ತುಮರಿ ಸಮೀಪದ ಮಣಕಂದೂರು ರಸ್ತೆ ಮಾರ್ಗ
ಬಸ್ ಸೇವೆ ಇಲ್ಲದ ತುಮರಿ ಸಮೀಪದ ಮಣಕಂದೂರು ರಸ್ತೆ ಮಾರ್ಗ   

ತುಮರಿ: ತಾಲ್ಲೂಕು ಕೇಂದ್ರದಿಂದ 55 ಕಿ.ಮೀ ದೂರದ ಕರೂರು ಹೋಬಳಿಯ ಹಲವು ಗ್ರಾಮಗಳು ಇಂದಿಗೂ ಬಸ್‌ ಸೌಲಭ್ಯವನ್ನೇ ಕಂಡಿಲ್ಲ. ಇಲ್ಲಿನ ಜನರು ಸಮೀಪದ ತುಮರಿ, ಕರೂರು, ನಿಟ್ಟೂರು, ಇಲ್ಲವೇ ಹೊಳೆಬಾಗಿಲಿಗೆ ಬಂದು ಬಸ್‌ ಹತ್ತಿ ಕೆಲಸ, ಕಾರ್ಯಗಳಿಗೆ ತೆರಳಬೇಕಿದೆ.

ಕೆಲ ಗ್ರಾಮಗಳು ದಶಕಗಳಿಂದ ಬಸ್‌ ಸೌಲಭ್ಯ ಕಂಡಿಲ್ಲ. ಇನ್ನು ಕೆಲ ಗ್ರಾಮಗಳಲ್ಲಿ ಮೊದಲಿದ್ದ ಖಾಸಗಿ ಬಸ್‌ಗಳು ಕೋವಿಡ್‌, ಶಕ್ತಿ ಯೋಜನೆಯ ಪರಿಣಾಮ ಸೇವೆ ಸ್ಥಗಿತಗೊಳಿಸಿವೆ.

ಸಿಗ್ಗಲು, ಕಳೋಡಿ, ಬೊಬ್ಬಿಗೆ, ಹೆರಾಟೆ ಗ್ರಾಮಗಳು ಇದುವರೆಗೂ ಬಸ್‌ ಸೌಲಭ್ಯವನ್ನೇ ಕಂಡಿಲ್ಲ. ಬರುವೆ, ಮಾರಲಗೋಡು, ಮಣಕಂದೂರು, ಕಳೂರು ಭಾಗಕ್ಕೆ ಕೆಲ ವರ್ಷಗಳ ಹಿಂದೆ ಖಾಸಗಿ ಬಸ್‌ ಸೌಲಭ್ಯ ಈಗ ಸ್ಥಗಿತಗೊಂಡಿದೆ.

ADVERTISEMENT

ಇಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೇರೆ ಗ್ರಾಮಕ್ಕೆ ಹೋಗಿ ಬಸ್‌ ಸೌಲಭ್ಯ ಪಡೆಯಬೇಕಿದೆ.

ದ್ವಿಚಕ್ರ ವಾಹನ ಸೌಲಭ್ಯ ಇರುವವರು ಅದನ್ನು ಬಳಸಿದರೆ, ಇನ್ನು ಕೆಲವರು ಟ್ಯಾಕ್ಸಿ, ಆಟೊ, ಓಮಿನಿಯಲ್ಲಿ ಬಾಡಿಗೆ ಕೊಟ್ಟು ಹೋಗುತ್ತಾರೆ. ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ವಿಧಿಯಿಲ್ಲದೇ ನಡೆದೇ ಹೋಗುವಂತಾಗಿದೆ. ಬಹುತೇಕ ವಿದ್ಯಾರ್ಥಿಗಳು ವಾಹನ ಸೌಲಭ್ಯವಿಲ್ಲದೇ ಕಾಲ್ನಡಿಗೆಯಲ್ಲಿ ಸಾಗುವುದು ಸಾಮಾನ್ಯ ಎಂಬಂತಾಗಿದೆ.

ಸೌಲಭ್ಯ ವಂಚಿತ ಹಳ್ಳಿಗಳಾದ ಸಿಗ್ಗಲು, ಕಳೋಡಿ, ಬೊಬ್ಬಿಗೆ, ಹೆರಾಟೆ ಗ್ರಾಮಗಳಿಗೆ ಸಮರ್ಪಕ ರಸ್ತೆ ಇದ್ದರೂ ಬಸ್ ಸೌಲಭ್ಯ ಇಲ್ಲ. ಈ ಗ್ರಾಮಗಳ ಜನರು ಬಸ್‌ಗಾಗಿ 12ರಿಂದ 13 ಕಿ.ಮೀ. ದೂರದ ತುಮರಿ ಇಲ್ಲವೇ ಹಾರಿಗೆ ಗ್ರಾಮಕ್ಕೆ ಬರಬೇಕು. ಅಲ್ಲಿಗೆ ಹೋಗಲು ಪಕ್ಕದ ಊರಿನ ಆಟೊ, ಕಾರು ಇತರೆ ವಾಹನಗಳಿಗೆ ದುಬಾರಿ ಮೊತ್ತದ ಬಾಡಿಗೆ ಕೊಟ್ಟು ಹೋಗಬೇಕು. ಇಲ್ಲ ನಡೆದುಕೊಂಡು ಹೋಗಬೇಕು.

ಇನ್ನು ಬರುವೆ, ಮಾರಲಗೋಡು, ಮಣಕಂದೂರು, ಕಳೂರು ಭಾಗಕ್ಕೆ ಕೆಲ ವರ್ಷಗಳ ಹಿಂದೆ ಖಾಸಗಿ ಬಸ್‌ ಸೌಲಭ್ಯ ಇತ್ತು. ಕೋವಿಡ್ ನಂತರ ಬಸ್‌ ಸೌಲಭ್ಯವೇ ಸ್ಥಗಿತಗೊಂಡಿದೆ. ಈ ಗ್ರಾಮಗಳ ಜನರೂ ಈಗ 12 ಕಿ.ಮೀ ದೂರದ ತುಮರಿ, ಇಲ್ಲವೇ 15 ಕಿ.ಮೀ. ದೂರದ ಹೊಸನಗರ ತಾಲ್ಲೂಕಿನ ನಿಟ್ಟೂರಿಗೆ ಬರಬೇಕು.

ಬಸ್‌ ಸೌಲಭ್ಯ ಇಲ್ಲದ ಕಾರಣ ಈ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರ ಸಾಗರದಲ್ಲೇ ಹಾಸ್ಟೆಲ್‌ ಇಲ್ಲವೇ ಸಂಬಂಧಿಕರ ಮನೆಯಲ್ಲಿ ಇದ್ದು ಓದಬೇಕು. ಇಲ್ಲ ಶಿಕ್ಷಣ ಮೊಟಕುಗೊಳಿಸಬೇಕಾದ ಅನಿವಾರ್ಯ ಇದೆ.

ಕಟ್ಟಿನಕಾರು, ಕೋಗಾರು, ಕಾರಣಿ, ಬಿಳಿಗಾರು ಭಾಗದಲ್ಲಿ ಮೊದಲು 10ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಈಗ 2–3ಕ್ಕೆ ಇಳಿದಿವೆ.

ಬಸ್ ಸೌಲಭ್ಯ ಇಲ್ಲದ ಕಾರಣ ಅನಾರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಈ ಭಾಗದ ಜನರ ಸಂಕಷ್ಟ ಹೇಳತೀರದು.

‘ನಮ್ಮ ಊರಿಗೆ ಸರ್ಕಾರಿ, ಖಾಸಗಿ ಯಾವ ಬಸ್‌ಗಳೂ ಬರುವುದಿಲ್ಲ. ಎಲ್ಲದಕ್ಕೂ ಬಾಡಿಗೆ ವಾಹನಗಳನ್ನು ಅವಲಂಬಿಸಿದ್ದೇವೆ. ಖಾಸಗಿ ಟ್ಯಾಕ್ಸಿ, ಓಮಿನಿಗೆ ದುಪ್ಪಟ್ಟು ಹಣ ಕೊಡಬೇಕು. ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಬಸ್‌ ಬಾರದ ನಮ್ಮಂತಹ ಊರಿನ ಮಹಿಳೆಯರ ಗತಿಯೇನು?’ ಎಂದು ಬಿ.ಕಾಂ. ವಿದ್ಯಾರ್ಥಿನಿ ಚೇತನಾ ಎಚ್.ಎಸ್. ಪ್ರಶ್ನಿಸುತ್ತಾರೆ.

ಶಾಲೆಗೆ ಕರೆ ತರುವುದೇ ವೃತ್ತಿ:

ಈ ಭಾಗದಲ್ಲಿ ಬಸ್ ವ್ಯವಸ್ಥೆಯಿಲ್ಲದ ಕಡೆ ಪಾಲಕರು ಮಕ್ಕಳನ್ನು ಶಾಲೆಗೆ ಬಿಟ್ಟು ಕರೆದುಕೊಂಡು ಬರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕೂಲಿ ಮಾಡುವವರ ಸ್ಥಿತಿಯಂತೂ ಹೇಳತೀರದು ಎಂಬಂತಿದೆ ಎಂದು ಮಾರಲಗೋಡಿನ ವಿಶ್ವ ಟಿ. ಅಳಲು ತೋಡಿಕೊಂಡರು.

‘ಕೆಲ ವರ್ಷಗಳಿಂದ ಸುಳ್ಳಳ್ಳಿ, ಮಾರಲಗೋಡು, ತುಮರಿ ಮೂಲಕ ಸಾಗರ ತಲುಪುತ್ತಿದ್ದ ಖಾಸಗಿ ಬಸ್ ರಸ್ತೆಯಲ್ಲಿ ಮಣ್ಣು ಬಿದ್ದ ಕಾರಣ ವಾರದಿಂದ ಬರುತ್ತಿಲ್ಲ. ಈ ಭಾಗಕ್ಕೆ ಬಸ್‌ ಸೇವೆ ಕಲ್ಪಿಸಲು ಶಾಸಕರು ಗಮನ ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಗ್ರಾಮಗಳಿಗೆ ಬಸ್ ಬಿಡುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಗ್ರಾಮದಲ್ಲಿ ಅನಾರೋಗ್ಯ ಹೆರಿಗೆಯಂತಹ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಷ್ಟಪಡಬೇಕಾಗಿದೆ. ಪ್ರತಿದಿನ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ನಮ್ಮ ಸಮಸ್ಯೆಗೆ ಮುಕ್ತಿ ಇಲ್ಲವೇ?

–ದೀಕ್ಷಾ ವಿದ್ಯಾರ್ಥಿನಿ

ಬೆಳಿಗ್ಗೆ ಕಾಲೇಜಿಗೆ ತೆರಳಲು ಬಸ್‌ ಸೌಲಭ್ಯ ಇಲ್ಲದೆ ಪ್ರತಿನಿತ್ಯ ಆರಂಭದ ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದೇವೆ. ಸಂಜೆ ಕಾಲೇಜು ಬಿಟ್ಟ ನಂತರ ಮನೆ ತಲುಪುವುದು ರಾತ್ರಿಯಾಗುತ್ತದೆ. ಸಂಬಂಧಿತರು ಬಸ್‌ ಸೌಲಭ್ಯ ಕಲ್ಪಿಸಲಿ.

–ನಿತಿನ್ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.