ADVERTISEMENT

ಶಿವಮೊಗ್ಗ: ಸಾವರ್ಕರ್‌ ಚಿತ್ರ ಪ್ರದರ್ಶನಕ್ಕೆ ಆಕ್ಷೇಪ, ಗೊಂದಲದ ವಾತಾವರಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:25 IST
Last Updated 14 ಆಗಸ್ಟ್ 2022, 3:25 IST
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರು ಶನಿವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು
ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರು ಶನಿವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು   

ಶಿವಮೊಗ್ಗ: ನಗರದ ಸಿಟಿ ಸೆಂಟರ್‌ ಮಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ
ಗಳ ಪ್ರದರ್ಶನ ವಿವಾದಕ್ಕೆ ಕಾರಣವಾಗಿದೆ.

ಮಾಲ್‌ ಒಳಗೆ ಪಾಲಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರಲ್ಲಿ ಮಹಾತ್ಮ ಗಾಂಧೀಜಿ ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶಿಸಲಾಗಿತ್ತು.

ಅಲ್ಲಿ ಸಾವರ್ಕರ್‌ ಅವರ ಭಾವಚಿತ್ರ ಅಳವಡಿಸಿರುವುದಕ್ಕೆ 25ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಮೆಹಕ್ ಶರೀಫ್ ಅವರ ಪತಿ, ಕನ್ನಡ ಜನಪರ ವೇದಿಕೆ ಅಧ್ಯಕ್ಷ ಆಸಿಫ್ ಶರೀಫ್ ಹಾಗೂ ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗಾಂಧೀಜಿ ಅವರ ಚಿತ್ರ ಸಣ್ಣದಾಗಿ ಹಾಕಿ ಸಾವರ್ಕರ್ ಚಿತ್ರ ದೊಡ್ಡದಾಗಿ ಹಾಕಲಾಗಿದೆ. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟವರ ಚಿತ್ರ ಹಾಕಲಾಗಿದೆ. ಅಲ್ಲದೇ ಮುಸ್ಲಿಂ ಹೋರಾಟಗಾರರ ಯಾರೊಬ್ಬರ ಚಿತ್ರವನ್ನೂ ಹಾಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವಿಡಿಯೊ ಕೂಡ ವೈರಲ್ ಆಗಿದೆ. ಇದರಿಂದ ಕೆಲಕಾಲ ಮಾಲ್‌ ಅವರಣದಲ್ಲಿ
ಗೊಂದಲ ಉಂಟಾಗಿತ್ತು.

ಭಾವಚಿತ್ರ ಪ್ರದರ್ಶನದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಆಸೀಫ್‌ ಮತ್ತು ಸಹಚರರ ವಿರುದ್ಧ ಪಾಲಿಕೆಯಿಂದ ದೂರು ನೀಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿಯಿಂದ ಧರಣಿ; ಕ್ರಮಕ್ಕೆ ಆಗ್ರಹ
ಆಗ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡರು, ಆಸಿಫ್ ಹಾಗೂ ಸಂಗಡಿಗರನ್ನು ಬಂಧಿಸುವಂತೆ ಸಿಟಿ ಸೆಂಟರ್‌ ಮಾಲ್‌ ಮುಂದೆ ಧರಣಿ ನಡೆಸಿದರು.

ಬಿಜೆಪಿ ನಗರಾಧ್ಯಕ್ಷ ಜಗದೀಶ್‌, ‘ಸಂಭ್ರಮದ ಸ್ವಾತಂತ್ರ್ಯ ಆಚರಣೆ ನಿಲ್ಲಿಸುವ ಪ್ರಯತ್ನ ಕೆಲವು ಕಿಡಿಗೇಡಿಗಳಿಂದ ನಡೆದಿತ್ತು. ನಾವು ಇಲ್ಲಿಗೆ ಬಂದು ಆಚರಣೆಯನ್ನು ಮುಂದುವರಿಸಿದ್ದೇವೆ. ಪಾಲಿಕೆಯವರು ಗಲಾಟೆ ಮಾಡಿದವರ ವಿರುದ್ಧ ದೂರು ನೀಡಬೇಕು‘ ಎಂದು ಆಗ್ರಹಿಸಿದರು.

‘ಸರ್ಕಾರದ ಆದೇಶದಂತೆ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಮಾಡಿದ್ದೇವೆ. ಅಲಂಕಾರ ಕಾರ್ಯ ನಡೆಯುತ್ತಿದ್ದ ವೇಳೆ ಆಸಿಫ್‌ ಮತ್ತು ಸಂಗಡಿಗರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಭಾವಚಿತ್ರ ಮಾತ್ರ ಹಾಕಿದ್ದೀರಿ. ಮುಸ್ಲಿಂ ಹೋರಾಟಗಾರರ ಭಾವಚಿತ್ರವಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಇದೆಲ್ಲ ಸಿಸಿಟಿವಿ ಕ್ಯಾಮೆರಾದಲ್ಲೂ ರೆಕಾರ್ಡ್‌ ಆಗಿದೆ’ ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.