ADVERTISEMENT

ಸೊರಬ: ರೈತ ವಿರೋಧಿ ಕಾಯ್ದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 12:48 IST
Last Updated 26 ಸೆಪ್ಟೆಂಬರ್ 2020, 12:48 IST
ಸೊರಬದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘಟನೆ ತಾಲ್ಲೂಕು ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿದರು.
ಸೊರಬದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘಟನೆ ತಾಲ್ಲೂಕು ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿದರು.   

ಸೊರಬ: ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲು ಸರ್ಕಾರ ಭೂಸುಧಾರಣ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲು ಮುಂದಾಗಿದೆ ಎಂದು ಪ್ರಗತಿಪರ ಸಂಘಟನೆಗಳ ತಾಲ್ಲೂಕು ಸಂಚಾಲಕ ರಾಜಪ್ಪ ಮಾಸ್ತರ್ ಆರೋಪಿಸಿದರು.

ವಿವಿಧ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.28ರಂದು ನಡೆಯುವ ಕರ್ನಾಟಕ ಬಂದ್ ಬೆಂಬಲಿಸಿ ಶನಿವಾರ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೊರೊನಾದಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಅವರ ಬದುಕಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಯೊಜನೆಗಳನ್ನು ರೂಪಿಸುವ ಬದಲಿಗೆ ರೈತವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಅನ್ಯಾಯ ಎಸಗುತ್ತಿವೆ. ಬಡ‌ ಕುಟುಂಬಗಳು ಇರುವ ಭೂಮಿಯನ್ನು ಉಳ್ಳವರಿಗೆ ಮಾರಾಟ ಮಾಡಿ ಬೀದಿಪಾಲಾಗುವ ಸಾಧ್ಯತೆಗಳಿವೆ. ಸರ್ಕಾರ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ಕರೆದು ಮಾತನಾಡಿಸುವ ಸೌಜನ್ಯ ತೋರದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು.

ADVERTISEMENT

ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥಗೌಡ, ‘ಅಧಿವೇಶನದಲ್ಲಿ ಬಹುಮತ ಇಲ್ಲದಿದ್ದರೂ ಮಸೂದೆ ಪಾಸು ಮಾಡಲು ಮುಂದಾಗಿರುವ ಸರ್ಕಾರ ರೈತರನ್ನು ಭೂರಹಿತರಾಗಿ ಮಾಡಲು ಹೊರಟಿದೆ’ ಎಂದು ದೂರಿದರು.

ಡಾ.ಜ್ಞಾನೇಶ್, ‘ಆಳುವ ಸರ್ಕಾರಗಳು ರೈತರ ಆಕ್ರಂದನವನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ಕಾಯ್ದೆ ತಿದ್ದುಪಡಿಯನ್ನು ಸಮರ್ಥನೆ ಮಾಡುವ ರೈತರಿಗೆ ಮೋಸ ಮಾಡುತ್ತಿವೆ. ಹೋರಾಟ ನಡೆಸುವ ರೈತರನ್ನು ಶ್ರೀಮಂತರು ಎಂದು ಹೇಳುವ ಸಚಿವರು ಎಲ್ಲ ಕಾಲಕ್ಕೂ ರೈತರು ಗುಡಿಸಲಿನಲ್ಲಿ ಬದುಕಬೇಕು ಎಂದು ಹೇಳುತ್ತಿರುವಂತಿದೆ’ ಎಂದರು.

ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ವಾಮನಗೌಡ, ‘ಕಾಯ್ದೆ ಅನುಷ್ಠಾನಗೊಂಡರೆ ಶ್ರೀಮಂತರ ಜಮೀನನ್ನು ಬಂದೂಕು ಹಿಡಿದು ಕಾಯುವ ಪರಿಸ್ಥಿತಿ ದೂರವಿಲ್ಲ. ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿರುವ ಹೋರಾಟ ಆಂದೋಲನ ರೀತಿಯಲ್ಲಿ ಬದಲಾದರೆ ಮಾತ್ರ ಸರ್ಕಾರ ಹಿಂಪಡೆಯಬಹುದು’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಕೆ. ಮಂಜುನಾಥ್ ಹಳೇಸೊರಬ, ಸಮಾಜ ಸೇವಕ ರಶೀದ್ ಸಾಬ್, ತಾಲ್ಲೂಕು ರೈತ ಸಂಘದ ಈಶ್ವರಪ್ಪ ಕೊಡಕಣಿ, ಸೀತಾ ಉಳವಿ, ಮಂಜು ಆರೇಕೊಪ್ಪ, ಆರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.