ADVERTISEMENT

ಶಿವಮೊಗ್ಗ |ಶೌಚಾಲಯದಲ್ಲಿ ಬಾಲಕಿಗೆ ಹೆರಿಗೆ: ಸಹೋದರನಿಂದಲೇ ಅತ್ಯಾಚಾರ, ಪೋಷಕರ ದೂರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಶಿವಮೊಗ್ಗ: ಸಹೋದರನಿಂದ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿಗೆ ಶುಕ್ರವಾರ ಮನೆಯಲ್ಲೇ ಹೆರಿಗೆ ಆಗಿದೆ. ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಆಕೆಯು ಮನೆಯ ಶೌಚಾಲಯದಲ್ಲಿ ಗಂಡು ಶಿಶುವಿಗೆ ಜನ್ಮನೀಡಿದ್ದಾಳೆ.

ಏಳೂವರೆ ತಿಂಗಳಿಗೆ ಪ್ರಸವವಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಇನ್‌ಕ್ಯುಬೇಟರ್‌ನಲ್ಲಿ ಇಟ್ಟು ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಆರೋಗ್ಯವಾಗಿದ್ದಾಳೆ.

ADVERTISEMENT

‘ಸ್ವಂತ ಸಹೋದರನೇ ಅತ್ಯಾಚಾರ ಎಸಗಿದ್ದಾನೆ’ ಎಂದು ಪಾಲಕರು ಕಾನೂನು ಸಂಘರ್ಷಕ್ಕೆ ಒಳಗಾದ 16 ವರ್ಷದ ಬಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ 9ನೇ ತರಗತಿವರೆಗೆ ಓದಿದ್ದು, ಶಾಲೆ ಬಿಟ್ಟಿದ್ದಾನೆ.

‘ಪಾಲಕರು ಕೆಲಸಕ್ಕೆ ಹೋದಾಗ ಅಣ್ಣ ಅತ್ಯಾಚಾರ ಎಸಗಿದ್ದಾನೆ. ಪಾಲಕರಿಗೆ ಹೇಳದಂತೆ ತಿಳಿಸಿದ್ದ. ಹೀಗಾಗಿ ಹೇಳಿರಲಿಲ್ಲ. ಒಮ್ಮೆ ಹೊಟ್ಟೆ ನೋವು ಬಂದಿದ್ದು, ಅಮ್ಮ ಮಾತ್ರೆ ತಂದು ಕೊಟ್ಟಿದ್ದರು. ಶಾಲೆ ಸಮವಸ್ತ್ರದ ಮೇಲೆ ಕೋಟ್ ಹಾಕುತ್ತಿದ್ದ ಕಾರಣ ಹೊಟ್ಟೆ ಬಂದಿರುವುದು ಯಾರಿಗೂ ಗೊತ್ತಾಗಿರಲಿಲ್ಲ’ ಎಂದು ಬಾಲಕಿಯು ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ವಿದ್ಯಾರ್ಥಿನಿ ಗರ್ಭಿಣಿ: ಪೋಕ್ಸೊ ಪ್ರಕರಣ

ಇಳಕಲ್ (ಬಾಗಲಕೋಟೆ): ಜಿಲ್ಲೆಯ ವಸತಿ ಶಾಲೆಯೊಂದರ 7ನೇ ತರಗತಿ ವಿದ್ಯಾರ್ಥಿನಿ 2 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಶನಿವಾರ ರಾತ್ರಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಅದೇ ವಸತಿ ಶಾಲೆಯಲ್ಲಿ ಹಿಂದಿನ ವರ್ಷ 8ನೇ ತರಗತಿ ಓದಿದ್ದ ಮುಧೋಳ ತಾಲ್ಲೂಕಿನ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಬಾಲಕ ವಿದ್ಯಾರ್ಥಿನಿಗೆ ಪುಸಲಾಯಿಸಿ, ಹಾಸ್ಟೆಲ್, ಹೊಲದಲ್ಲಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ತನಿಖೆ ನಡೆಸಿದ್ದಾರೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.