ADVERTISEMENT

ಶಿವಮೊಗ್ಗ: ಶಂಕಿತರ ಬಂಧನ- ಪುರಲೆ ಸಮೀಪ ನದಿ ದಂಡೆಯಲ್ಲಿ ಶೋಧ

ಆರೋಪಿಗಳ ಹೆಚ್ಚಿನ ವಿಚಾರಣೆ ಆರಂಭಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:09 IST
Last Updated 21 ಸೆಪ್ಟೆಂಬರ್ 2022, 6:09 IST
ತೀರ್ಥಹಳ್ಳಿ ಅಂಗಡಿ ಮಳಿಗೆ ಶೋಧಾಚರಣೆ ನಡೆಸುತ್ತಿರುವುದು.
ತೀರ್ಥಹಳ್ಳಿ ಅಂಗಡಿ ಮಳಿಗೆ ಶೋಧಾಚರಣೆ ನಡೆಸುತ್ತಿರುವುದು.   

ಶಿವಮೊಗ್ಗ: ನಿಷೇಧಿತ ಸಂಘಟನೆ ಐಎಸ್ ನಂಟು ಹೊಂದಿರುವ ಆರೋಪದ ಮೇಲೆ ಬಂಧಿಸಲಾದ ಮಾಝ್ ಮುನೀರ್ ಅಹಮದ್ ಹಾಗೂ ಸೈಯದ್ ಯಾಸೀನ್ ಅವರನ್ನು ನ್ಯಾಯಾಲಯ ಕಸ್ಟಡಿಗೆ ಕೊಡುತ್ತಿದ್ದಂತೆಯೇ ಭದ್ರಾವತಿ ಉಪವಿಭಾಗದ ಹೆಚ್ಚುವರಿ ಎಸ್ಪಿ ಜಿತೇಂದ್ರಕುಮಾರ ದಯಾಮಾ ಅವರ ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದರು.

ಮಾಝ್ ಮುನೀರ್ ಅಹಮದ್‌ನನ್ನು ಪೊಲೀಸರ ಒಂದು ತಂಡ ಸ್ಥಳ ಮಹಜರಿಗೆ ಒಂದು ತಂಡ ಮಂಗಳೂರಿಗೆ ಕರೆದೊಯ್ಯಿತು. ಸೈಯ್ಯದ್‌ ಯಾಸೀನ್‌ನನ್ನು ಮತ್ತೊಂದು ತಂಡ ಚನ್ನಗಿರಿ ರಸ್ತೆಯ ಗುರುಪುರ–ಪುರಲೆ ಸಮೀಪದ ಅಡಿಕೆ ತೋಟಗಳಿಂದ ಆವೃತವಾದ ತುಂಗಾ ನದಿಯ ದಂಡೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಆ ಪ್ರದೇಶದಲ್ಲಿ ಉಗ್ರ ಚಟುವಟಿಕೆ, ಸ್ಫೋಟಕಗಳ ಬಳಕೆಗೆ ಸಂಬಂಧಿಸಿದಂತೆ ತರಬೇತಿ ನಡೆಸಿದ್ದರು ಎಂಬ ಸಂಶಯದ ಮೇರೆಗೆ ದಾವಣಗೆರೆ ಹಾಗೂ ಬೆಂಗಳೂರಿನಿಂದ ಬಂದಿದ್ದ ಎಫ್‌ಎಸ್‌ಎಲ್ ತಜ್ಞರ ತಂಡ ಆರೋಪಿಯ ಜೊತೆ ತೆರಳಿ ಪರಿಶೀಲನೆ ನಡೆಸಿತು.

ಆಗಸ್ಟ್ 15ರಂದು ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಉಂಟಾದ ಉದ್ವಿಗ್ನ ಸ್ಥಿತಿಯ ನಂತರ ನಡೆದ ಬಟ್ಟೆ ಅಂಗಡಿ ನೌಕರ ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತನಾದ ಜಬೀಯುಲ್ಲಾನ ವಿಚಾರಣೆ ವೇಳೆ ದೊರೆತ ಸುಳಿವು ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

‘ನನ್ನ ಮೊಮ್ಮಗ ಯಾಸೀನ್ ಅಮಾಯಕ. ಓದುವುದು ಬಿಟ್ಟರೆ ಅವನಿಗೆ ಪ್ರಪಂಚ ಜ್ಞಾನವೇ ಇಲ್ಲ. ನಮಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಇವತ್ತೇ ನಮಗೆ ಗೊತ್ತಾಗಿದ್ದು. ಸ್ನೇಹಿತರು ಕರೆದೊಯ್ದು ಪೊಲೀಸರಿಗೆ ಸಿಕ್ಕಿಸಿದ್ದಾರೆ‘ ಎಂದು ಅಜ್ಜ ಶಾಮೀರ್ ಮಾಧ್ಯಮದವರ ಎದುರು ಅಳಲು ತೋಡಿಕೊಂಡರು.

‘ಯಾಸೀನ್‌ ಅಪ್ಪ ವೆಲ್ಡಿಂಗ್ ಕೆಲಸ ಮಾಡುತ್ತಾರೆ. ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬಳು ಮಗಳು. ಯಾಸೀನ್‌ ದೊಡ್ಡವನು‘ ಎಂದು ಶಾಮೀರ್ ತಿಳಿಸಿದರು.

ಸ್ಫೋಟಕಗಳ ಸಂಗ್ರಹ: ಎಫ್‌ಐಆರ್‌ನಲ್ಲಿ ಉಲ್ಲೇಖ

ಮೂವರು ಆರೋಪಿಗಳು ತಮ್ಮ ಬಳಿ ಸ್ಫೋಟಕಗಳನ್ನು ಇಟ್ಟುಕೊಂಡಿದ್ದರು ಹಾಗೂ ರಾಷ್ಟ್ರಧ್ವಜವನ್ನು ಸುಟ್ಟಿದ್ದರು ಎಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಭದ್ರಾವತಿ ಉಪವಿಭಾಗದ ಎಎಸ್‌ಪಿ ಜಿತೇಂದ್ರಕುಮಾರ್ ದಯಾಮ ಅವರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.

ಶಾರಿಕ್ ಕುಟುಂಬದ ಅಂಗಡಿಯಲ್ಲಿ ತಪಾಸಣೆ

ತೀರ್ಥಹಳ್ಳಿ: ನಿಷೇಧಿತ ಐಎಸ್ ಸಂಘಟನೆ ನಂಟು ಸಂಬಂಧಿಸಿದ ಆರೋಪದಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ತೀರ್ಥಹಳ್ಳಿ ಮೂಲದ ಶಾರಿಕ್‌ (24) ಕುಟುಂಬ ಸದಸ್ಯರನ್ನು ಮಂಗಳವಾರ ಭೇಟಿಯಾದ ಪೊಲೀಸರು ಅವರಿಂದ ಮಾಹಿತಿ ಪಡೆದರು.

ನಂತರ ಪಟ್ಟಣದ ಟಾಕೀಸ್‌ ರಸ್ತೆಯಲ್ಲಿರುವ ಶಾರಿಕ್ ಕುಟುಂಬಕ್ಕೆ ಸೇರಿ ಅಂಗಡಿ ಮಳಿಗೆಯಲ್ಲಿ ಶೋಧ ಕಾರ್ಯ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.