ADVERTISEMENT

‘ಜೈಲಿಗೆ ಹೋಗಿ ಬಂದವರು’ ಪದ ಬಳಕೆ ಸಲ್ಲದು: ಬಿಎಸ್‌ವೈ ಪರ ಆಯನೂರು ಬ್ಯಾಟಿಂಗ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 12:20 IST
Last Updated 6 ಡಿಸೆಂಬರ್ 2018, 12:20 IST
ಆಯನೂರು ಮಂಜುನಾಥ್ ಹಾಗೂ ಬಿ.ಎಸ್. ಯಡಿಯೂರಪ್ಪ
ಆಯನೂರು ಮಂಜುನಾಥ್ ಹಾಗೂ ಬಿ.ಎಸ್. ಯಡಿಯೂರಪ್ಪ   

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಡಿನೋಟಿಫೈ ಪ್ರಕರಣ ಮುಗಿದ ಅಧ್ಯಾಯ. ವಿರೋಧ ಪಕ್ಷಗಳು ಅಥವಾ ಮಾಧ್ಯಮಗಳು ಇನ್ನು ಮುಂದೆ ಅವರನ್ನು ‘ಜೈಲಿಗೆ ಹೋಗಿ ಬಂದವರು’ ಎಂದು ಸಂಬೋಧಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಎಚ್ಚರಿಸಿದರು.

ವಕೀಲರಾದ ಸಿರಾಜುದ್ದೀನ್, ಬಾಲರಾಜ್ ಯಡಿಯೂರಪ್ಪ ವಿರುದ್ಧ ಸುಳ್ಳು ದೂರು ದಾಖಲಿಸಿದ್ದರು. ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಕಾಂಗ್ರೆಸ್ ಏಜೆಂಟ್‌ ರೀತಿ ನಡೆದುಕೊಂಡಿದ್ದರು. 2017ರಲ್ಲಿಯೇ ಹೈಕೋರ್ಟ್‌ ಯಡಿಯೂರಪ್ಪ ಪರ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಈಗ ಸುಪ್ರೀಂಕೋರ್ಟ್ ತೀರ್ಪು ಹೊರ ಬಂದಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಯಡಿಯೂರಪ್ಪ ವಿರುದ್ಧದ ಪ್ರಕರಣಗಳು ರಾಜಕೀಯ ಷಡ್ಯಂತ್ರ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಬಳಸಿಕೊಂಡು ಕೆಲವರು ರಾಜ್ಯಪಾಲರ ಮೂಲಕ ತುಳಿಯುವ ಪ್ರಯತ್ನ ಮಾಡಿದರು. ಅಂದು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ಯಡಿಯೂರಪ್ಪ ವಿಷಯದಲ್ಲಿ ವಿಶೇಷ ಆಸಕ್ತಿ ತಾಳಿದರು. ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಕೆಲವು ಮಾಜಿ ಮುಖ್ಯಮಂತ್ರಿಗಳ ಮೇಲೂ ಡಿನೋಟಿಫೈ, ಗಣಿ ಹಗರಣಗಳು ಇದ್ದರೂ ಅವರ ತಂಟೆಗೆ ಹೋಗಲಿಲ್ಲ ಎಂದು ಹರಿಹಾಯ್ದರು.

ADVERTISEMENT

ಎಲ್ಲ ಷಡ್ಯಂತ್ರದ ಫಲವಾಗಿ ಯಡಿಯೂರಪ್ಪ ಅವರು 24 ದಿನ ಜೈಲಿನಲ್ಲಿ ಕಳೆದರು. ಮಾನಸಿಕ ಕಿರಿಕಿರಿ ಅನುಭವಿಸಿದರು. ರಾಜಕಾರಣದ ದಿಕ್ಕು ಬದಲಾಯಿತು. ಅದರಲ್ಲಿ ಕಾಂಗ್ರೆಸ್‌ ಮುಖಂಡರ ಪಾತ್ರ ಎದ್ದು ಕಾಣುತ್ತಿತ್ತು ಎಂದು ದೂರಿದರು.

ಆಮೆಗತಿ ಸ್ಮಾರ್ಟ್‌ಸಿಟಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್‌ಸಿಟಿ ಯೋಜನೆ ನನೆಗುದಿಗೆ ಬಿದ್ದಿದೆ. ಯಾವ ಕೆಲಸಗಳೂ ಆಗುತ್ತಿಲ್ಲ. ರಸ್ತೆಗಳ ವಿಸ್ತರಣೆ ತುರ್ತಾಗಿ ಆಗಬೇಕಿದೆ. ವಾಣಿಜ್ಯ ಮಳಿಗೆಗಳ ಮಾಲೀಕರು ಪಾರ್ಕಿಂಗ್ ವ್ಯವಸ್ಥೆ ಮಾಡದೇ ಸಾರ್ವಜನಿಕರಿಗೆ ಕಿರಿ ಮಾಡುತ್ತಿದ್ದಾರೆ. ಪಾರ್ಕಿಂಗ್ ಜಾಗ ಬಿಡದೆ ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರ ಕಾಯಂಗೆ ಆಗ್ರಹ: ಉನ್ನತ ಶಿಕ್ಷಣ ಸಚಿವ ಎಚ್‌.ಡಿ. ದೇವೇಗೌಡ ನೇತೃತ್ವದಲ್ಲಿ ಈಚೆಗೆ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಸಭೆ ನಡೆಯಿತು. ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಎಲ್ಲರೂ ಪಕ್ಷಾತೀತವಾಗಿ ಒತ್ತಾಯಿಸಿದೆವು. ಕನಿಷ್ಠ ₨ 25 ಸಾವಿರ ವೇತನ ನೀಡಲು ಮನವಿ ಮಾಡಿದ್ದೇವೆ. 10 ವರ್ಷ ಸೇವೆ ಸಲ್ಲಿಸಿದವರ ಸೇವೆ ಕಾಯಂ ಮಾಡಲು ಚಿಂತನೆ ನಡೆದಿದೆ ಎಂಬ ವದಂತಿ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ದತ್ತಾತ್ತಿ, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ದಿನೇಶ್, ಮಧುಸೂದನ್, ರತ್ನಾಕರ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.