ಪ್ರಾತಿನಿಧಿಕ ಚಿತ್ರ
ಶಿವಮೊಗ್ಗ: ‘ಶರಾವತಿ ಜಲ ವಿದ್ಯುತ್ ಯೋಜನೆ ಸೇರಿದಂತೆ ವಿವಿಧ ಅಣೆಕಟ್ಟೆ ನಿರ್ಮಾಣಕ್ಕೆ ಭೂಮಿ ನೀಡಿದ್ದ ಸಂತ್ರಸ್ತರಿಗೆ ಅನ್ಯಾಯ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಮಲೆನಾಡು ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಎಚ್ಚರಿಸಿದರು.
ಇಲ್ಲಿನ ತುಂಗಾ, ಭದ್ರಾ, ವರಾಹಿ, ಚಕ್ರಾ, ಸಾವೇಹಕ್ಲು, ಅಂಬ್ಲಿಗೊಳ ಅಣೆಕಟ್ಟು ನಿರ್ಮಾಣಕ್ಕೆ ರೈತರು ಭೂಮಿ ತ್ಯಾಗ ಮಾಡಿದ್ದಾರೆ. ಆದರೆ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರೈತರಿಗೆ ಭೂಮಿಹಕ್ಕು ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
60 ವರ್ಷಗಳ ಹಿಂದೆ ಕೆಲ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ, ಈಗ ಹಕ್ಕುಪತ್ರ ಕೊಡುವ ಬದಲು ಕೊಟ್ಟಿರುವ ಹಕ್ಕುಪತ್ರಗಳನ್ನೇ ಕಸಿದುಕೊಳ್ಳುತ್ತಿದ್ದಾರೆ. ಈ ಹಿಂದೆ ರೈತ ವಿರೋಧಿ ತೀರ್ಪು ನ್ಯಾಯಾಲಯದಿಂದ ಬಂದಾಗ ಸರ್ಕಾರಗಳು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲೇ ಇಲ್ಲ ಎಂದು ಆರೋಪಿಸಿದರು.
ಶರಾವತಿ ಸಂತ್ರಸ್ತರ ಸಮಸ್ಯೆ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಪರಸ್ಪರ ಚರ್ಚಿಸಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೂ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತುಘಲಕ್ ದರ್ಬಾರು ಮಾಡುತ್ತಿದ್ದಾರೆ ಎಂದು ದೂರಿದರು.
ಯಾವುದೇ ಕಾನೂನು ರೈತರನ್ನು ಕಾಪಾಡುತ್ತಿಲ್ಲ. ರೈತರ ಸಾಗುವಳಿ ಭೂಮಿಯನ್ನು ಅರಣ್ಯಭೂಮಿ ಎಂದು ನಮೂದಿಸಲಾಗುತ್ತಿದೆ. ಅಷ್ಟೇ ಅಲ್ಲ, ಕೊಟ್ಟ ಹಕ್ಕುಪತ್ರಗಳನ್ನು ವಜಾ ಮಾಡಲಾಗುತ್ತಿದೆ ಎಂದು ದೂರಿದ ಅವರು, ಈ ಬಾರಿ ಶಿಕಾರಿಪುದಿಂದ ಪ್ರತಿಭಟನೆಯ ಕಿಡಿ ಹತ್ತಿಕೊಳ್ಳಲಿದೆ. ಪ್ರತಿಭಟನೆಗೆ ಎಲ್ಲ ರೀತಿಯ ರೂಪುರೇಷೆ ಸಿದ್ಧವಾಗುತ್ತಿದೆ ಎಂದರು.
ಪ್ರಮುಖರಾದ ಷಣ್ಮುಖ, ಪ್ರವೀಣ್ ಬ್ಯಾಡನಹಳ್ಳಿ, ಸರ್ವತ್ತೋಮ, ಸುಬ್ಬಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.