ADVERTISEMENT

ಕಸಾಪ ಸಭೆಯಲ್ಲಿ ಪಾಲ್ಗೊಳ್ಳಲು ಪೊಲೀಸ್ ಭದ್ರತೆ ಕೊಡಿ: ಎಸ್ಪಿಗೆ ಡಿ.ಮಂಜುನಾಥ ಮನವಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 8:35 IST
Last Updated 12 ಮೇ 2025, 8:35 IST
   

ಶಿವಮೊಗ್ಗ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಬೆಂಬಲಿಗರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ, ಬೆಂಗಳೂರಿನಲ್ಲಿ ಮೇ 14ರಂದು ನಡೆಯುವ ಪರಿಷತ್ ನ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ತಮಗೆ ಪೊಲೀಸ್ ಭದ್ರತೆ ಒದಗಿಸುವಂತೆ ಎಸ್ಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಮಹೇಶ್ ಜೋಶಿ ಅವರ ಪರಮಾಧಿಕಾರ, ಅಸಂವಿಧಾನಿಕ ನಡೆಯ ವಿರುದ್ಧ ಮೂರು ವರ್ಷಗಳಿಂದ ನಿರಂತರವಾಗಿ ಪರಿಷತ್ ನ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸುತ್ತಿದ್ದೇನೆ. ಇದರ ಪರಿಣಾಮವಾಗಿ ಕಸಾಪ ಆಜೀವ ಸದಸ್ಯತ್ವದಿಂದಲೇ ಅಮಾನತು ಮಾಡುವ ಷೋಕಾಸ್ ನೋಟಿಸ್ ನೀಡಿ ಅವರು ನನಗೆ ಬೆದರಿಕೆ ಒಡ್ಡಿದ್ದಾರೆ.

ಈ ಬಾರಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲು ಬಯಸಿರುವ ಅಂಶಗಳನ್ನು ಹಾಗೂ ಸಭೆಯಲ್ಲಿ ಮಾತನಾಡಲು ಅಗತ್ಯ ಅನುಮತಿ ನೀಡುವಂತೆ ಕೋರಿ ಕಸಾಪ ರಾಜ್ಯಾಧ್ಯಕ್ಷರಿಗೆ ಈಗಾಗಲೇ ಪತ್ರ ಬರೆದಿದ್ದೇನೆ.

ADVERTISEMENT

ಇದರಿಂದ ಕೆರಳಿ, ತಮ್ಮ ಮೇಲೆ ದ್ವೇಷ ಅಸೂಯೆಯಿಂದ ಸಭೆಯಲ್ಲಿನ ಘಟನಾವಳಿಗಳನ್ನು ತಿರುಚಿ, ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇದೆ ಹಾಗೂ ರಾಜ್ಯಾಧ್ಯಕ್ಷರ ಬೆಂಬಲಿಗರಿಂದಲೂ ಅಪಾಯವಿರುವುದರಿಂದ, ಸಭೆಯಲ್ಲಿ ಭಾಗವಹಿಸಲು ಅಗತ್ಯ ಪೊಲೀಸ್ ಭದ್ರತೆ ನೀಡುವಂತೆ ಡಿ.ಮಂಜುನಾಥ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮನವಿ ಸಲ್ಲಿಕೆ ವೇಳೆ ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ಆಜೀವ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.