ADVERTISEMENT

ಪಿಎಸ್‌ಐ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಒಪ್ಪಿಸಿ -ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:07 IST
Last Updated 17 ಮೇ 2022, 4:07 IST
ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು   

ಸಾಗರ: ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಹಿಂದೆ ಇರುವ ನಿಜವಾದ ವ್ಯಕ್ತಿಗಳು ಹೊರಬರಬೇಕು ಎಂದಾದರೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಹಲವು ಪ್ರಮುಖರು ಭಾಗಿಯಾಗಿದ್ದಾರೆ. ಸಿಐಡಿ ರಾಜ್ಯ ಸರ್ಕಾರದ ಕೈಗೊಂಬೆ ಆಗಿರುವುದರಿಂದ ಹಗರಣದಲ್ಲಿ ಭಾಗಿಯಾಗಿರುವ ಪ್ರಮುಖರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಯುವಜನರ ಭವಿಷ್ಯದ ಕನಸನ್ನು ನುಚ್ಚುನೂರು ಮಾಡಿರುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕಾದರೆ ಸಿಬಿಐ ತನಿಖೆಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಸೇತುವೆ ನಿರ್ಮಾಣಕ್ಕೆ ₹ 98 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಶಾಸಕ ಹಾಲಪ್ಪ ಹರತಾಳು ಅವರು ತಮಗೆ ಶೇ 40ರಷ್ಟು ಕಮಿಷನ್ ತಲುಪಿಲ್ಲ ಎನ್ನುವ ಕಾರಣಕ್ಕೆ ಈ ಸೇತುವೆ ಕಾಮಗಾರಿ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಖಂಡಿಸಿ ಆ ಭಾಗದ ಜನರು ಶೀಘ್ರದಲ್ಲೇ ಪಾದಯಾತ್ರೆ ನಡೆಸಲಿದ್ದಾರೆ ಎಂದರು.

ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನಗರವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಿರುವ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಗುತ್ತಿಗೆದಾರರು ಇಲ್ಲಿಂದ ಪರಾರಿಯಾಗಿದ್ದಾರೆ. ಫಲಾನುಭವಿಗಳು ಬಾಡಿಗೆ ಮನೆಯಲ್ಲಿದ್ದು, ಸ್ವಂತ ಮನೆಗೆ ಹೋಗುವ ಅವರ ಕನಸು ಕನಸಾಗಿಯೇ ಉಳಿದಿದೆ. ಆಶ್ರಯ ಮನೆ, ಬಗರ್‌ಹುಕುಂ ಹಕ್ಕುಪತ್ರ ವಿತರಣೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ’ ಎಂದು ಅವರು ದೂರಿದರು.

ನಗರದ ಇಂದಿರಾಗಾಂಧಿ ಕಾಲೇಜು ಸಮೀಪದ ಸಂತೆ ಮಾರುಕಟ್ಟೆ ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಅದನ್ನು ಉದ್ಘಾಟನೆ ಮಾಡಲು ಶಾಸಕ ಹಾಲಪ್ಪ ಅವರು ಮನಸ್ಸು ಮಾಡುತ್ತಿಲ್ಲ. ಈ ಮಾರುಕಟ್ಟೆ ಸ್ಥಳ ಕೇವಲ ಶಾಸಕರ ಮಕ್ಕಳ ಮದುವೆಗೆ ಸೀಮಿತವಾದಂತಾಗಿದೆ. ಮಾತೆತ್ತಿದರೆ ಗಣಪತಿ ಕೆರೆ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ಕೆರೆ ದಂಡೆಯ ಮೇಲೆ ಅವರು ಆಸ್ತಿ ಖರೀದಿಸಿದ್ದು, ತಮ್ಮ ಆಸ್ತಿ ಅಭಿವೃದ್ಧಿಗಾಗಿ ಕೆರೆ ಅಭಿವೃದ್ಧಿ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ. ಕೆರೆ ಒತ್ತುವರಿದಾರರ ಪಟ್ಟಿಯಲ್ಲಿ ಶಾಸಕರ ಹೆಸರು ಕೂಡ ಸೇರಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಗೋಪಾಲಕೃಷ್ಣ ಆರೋಪಿಸಿದರು.

‘ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಸಮೀಪ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು ಅವರ ವಾಹನವನ್ನು ತಡೆದಿರುವ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಒಂದು ವೇಳೆ ಅವರಿಗೆ ಬೆದರಿಕೆ ಹಾಕಿದ್ದರೆ ನಾನು ಅದನ್ನು ಖಂಡಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಐ.ಎನ್. ಸುರೇಶ್ ಬಾಬು, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಮಾಜಿ ಸದಸ್ಯರಾದ ಡಿ.ದಿನೇಶ್, ತಾರಾಮೂರ್ತಿ, ಪ್ರಮುಖರಾದ ಅಶೋಕ್ ಬೇಳೂರು, ಯಶವಂತ ಫಣಿ, ಸೈಯದ್ ಅನ್ವರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.