ADVERTISEMENT

ಸಮಾಜದ ಏಳಿಗೆಗೆ ಶುದ್ಧ ಮನಸ್ಸು ಅಗತ್ಯ: ಕಾಗೊಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 15:08 IST
Last Updated 10 ಫೆಬ್ರುವರಿ 2024, 15:08 IST
ತ್ಯಾಗರ್ತಿ ಸಮೀಪದ ಕಲ್ಕೊಪ್ಪ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ, ಗುರುವಂದನ ಹಾಗೂ ಸ್ನೇಹಮಿಲನ ಕಾರ್ಯಕ್ರಮವನ್ನು ಮಾಜಿ ಸಚಿವ ಕಾಗೊಡು ತಿಮ್ಮಪ್ಪ ಉದ್ಘಾಟಿಸಿದರು
ತ್ಯಾಗರ್ತಿ ಸಮೀಪದ ಕಲ್ಕೊಪ್ಪ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ, ಗುರುವಂದನ ಹಾಗೂ ಸ್ನೇಹಮಿಲನ ಕಾರ್ಯಕ್ರಮವನ್ನು ಮಾಜಿ ಸಚಿವ ಕಾಗೊಡು ತಿಮ್ಮಪ್ಪ ಉದ್ಘಾಟಿಸಿದರು   

ತ್ಯಾಗರ್ತಿ: ‘ಶುದ್ಧ ಮನಸ್ಸಿನಿಂದ ಕೂಡಿದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ. ಈ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಜನಸ್ಪಂದನ ದೊರಕಿರುವುದೇ ಸಾಕ್ಷಿ’ ಎಂದು ಮಾಜಿ ಸಚಿವ ಕಾಗೊಡು ತಿಮ್ಮಪ್ಪ ಹೇಳಿದರು.

ಸಮೀಪದ ಕಲ್ಕೊಪ್ಪ ಕಾಲೇಜು ಆವರಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ಬರೂರು– ಕಲ್ಕೊಪ್ಪ ಗ್ರಾಮಸ್ಥರು ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ, ಗುರುವಂದನ ಹಾಗೂ ಸ್ನೇಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಳೇ ವಿದ್ಯಾರ್ಥಿಗಳು ವಿದ್ಯೆ ಕಲಿತ ಕಾಲೇಜು ಹಾಗೂ ಶಾಲೆಗಳನ್ನು ನೆನಪಿಸಿಕೊಂಡಿರುವುದು ಸಂತೋಷದ ಸಂಗತಿ. ಈ ಗ್ರಾಮದಲ್ಲಿ ಕಾಲೇಜು ಪ್ರಾರಂಭಿಸುವಾಗ ಹಲವಾರು ಸಾಧಕ ಬಾಧಕಗಳನ್ನು ಚರ್ಚಿಸಿ ಗ್ರಾಮದ ಸುತ್ತಮುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಲೇಜನ್ನು ಪ್ರಾರಂಭಿಸಲಾಯಿತು. ಇಂದಿಗೆ 30 ವರ್ಷ ತುಂಬಿದ್ದು ಇನ್ನೂ ಹೆಚ್ಚಿನ ಮಕ್ಕಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗೆ ಏರಲೆಂದು  ಆಶಿಸುತ್ತೇನೆ’ ಎಂದು ಭಾವುಕರಾದರು.

ADVERTISEMENT

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ‘ಭಾವಬುತ್ತಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರು, ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸ್ಥಳ ಕಲ್ಪಿಸಿದ ದಾನಿಗಳು, ಕಾಲೇಜು ಪ್ರಾರಂಭದ ಮೊದಲ ವರ್ಷದ ನೋಂದಾಯಿತ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಬರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಎಚ್, ಉಪಾಧ್ಯಕ್ಷರಾದ ಅನ್ನಪೂರ್ಣ ಪುಟ್ಟಪ್ಪ, ಶಿವಮೊಗ್ಗ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಪ್ರಾಂಶುಪಾಲರಾದ ಪ್ರೇಮಲತಾ, ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಇ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಿವಕುಮಾರ್ ಎನ್.ಡಿ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿನಯ್‌ಕುಮಾರ್ ಬಿ.ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.