ADVERTISEMENT

ಹಿಂದೂ ಮಕ್ಕಳಿಗೆ ಕುರಾನ್ ಪಠಣ!

ವೈರಲ್ ಆದ ವೀಡಿಯೊ, ಭಾವೈಕ್ಯ ಸಂದೇಶ ಸಾರುವ ಶಾಲೆಯ ಉದ್ದೇಶ ತಿರುಚಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 11:05 IST
Last Updated 30 ಜೂನ್ 2018, 11:05 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಶಿವಮೊಗ್ಗ: ಇಲ್ಲಿನ ಖಾಸಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಿಂದೂ ಮಕ್ಕಳಿಗೆ ಕುರಾನ್ ಅಧ್ಯಾಯ ಹೇಳಿಕೊಡುವ ವೀಡಿಯೊ ವೈರಲ್‌ ಆಗಿದ್ದು, ಧಾರ್ಮಿಕ ಸೂಕ್ಷ್ಮತೆಯ ಶಿವಮೊಗ್ಗ ನಗರದಲ್ಲಿ ಆತಂಕ ಮೂಡಿಸಿದೆ.

ಆರ್‌ಎಂಎಲ್‌ ನಗರದ ವಿದ್ಯಾದೀಪ ಶಾಲೆಯಲ್ಲಿ ನಡೆದಿರುವ ಈ ಪ್ರಕರಣದ ವಾಸ್ತವೇ ಬೇರೆಯಾಗಿದೆ. ಸುದುದ್ದೇಶದ ಘಟನೆಯ ವಿಡಿಯೊ ತಿರುಚಿದ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕೋಮು ಭಾವನೆ ಕೆರಳಿಸುವ ಕೆಲಸ ಮಾಡಿರುವುದು ಪೊಲೀಸರ ವಿಚಾರಣೆ ವೇಳೆಬೆಳಕಿಗೆ ಬಂದಿದೆ.

ವಾಸ್ತವ ಏನು?: ಸ್ವಾತಂತ್ರ್ಯೋತ್ಸವದ ದಿನ ಭಾವೈಕ್ಯದ ಸಂದೇಶ ಸಾರುವ ನೃತ್ಯ ಸ್ಪರ್ಧೆ ಆಯೋಜಿಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಶಾಲೆಯಲ್ಲಿನ 42 ಪುಟ್ಟ ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಭಗವದ್ಗೀತೆ, ಕುರಾನ್‌ನ ಆಯ್ದ ಅಧ್ಯಯನಗಳನ್ನು ಕಲಿಸಲಾಗುತ್ತಿತ್ತು. ಕಲಿಕೆಯ ಈ ವಿಡಿಯೊ ಮಾಡುತ್ತಿದ್ದ ಅದೇ ಶಾಲೆಯ ಶಿಕ್ಷಕರು ಪೋಷಕರೇ ಇರುವ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಾಕುತ್ತಿದ್ದರು (ಮಕ್ಕಳ ಕಲಿಕೆಯಮಟ್ಟ ವೀಕ್ಷಣೆಗಾಗಿ). ಹೀಗೆ ಹಾಕಿದ ವಿಡಿಯೊದಲ್ಲಿನ ಕುರಾನ್‌ ಪಠಿಸುವ ಭಾಗವನ್ನು ಮಾತ್ರ ಎಡಿಟ್ ಮಾಡಿ,ನಂತರ ಸಾಮಾಜಿಕ ಜಾಲ ತಾಣಗಳಿಗೆಅಪ್‌ಲೋಡ್ ಮಾಡಲಾಗಿದೆಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ಸಭೆ ನಡೆಯಿತು. ಭಜರಂಗ ದಳದ ಮುಖಂಡರೂ ಶಾಲೆಗೆ ಭೇಟಿ ನೀಡಿದ್ದರು. ವಿವಾದಕ್ಕೆ ಕಾರಣವಾಗುವ ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳದಂತೆ ಶಾಲಾ ಮುಖ್ಯಸ್ಥರಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.