
ತೀರ್ಥಹಳ್ಳಿ: ಕೇಕೆ, ಪೀ..ಪೀ… ಆಟಿಕೆಗಳ ಸದ್ದು, ಒಂದನ್ನೊಂದು ಹಿಂಬಾಲಿಸಿ ಆಕಾಶಕ್ಕೆ ಸಿಡಿಯುವ ಸಿಡಿಮದ್ದುಗಳು, ಬಲದಂಡೆಯ ಮೇಲೆ ಸುಮಧುರ ಸಂಗೀತದ ಮಾಧುರ್ಯ, ತುಂಗಾ ನದಿಯಲ್ಲಿ ತೇಲಿದ ರಾಮೇಶ್ವರ ದೇವರು.. ಮರಳು ದಂಡೆಯ ಮೇಲೆ ಕುಳಿತಿದ್ದ ಸಾವಿರಾರು ಜನರ ಮಂದಹಾಸ ಬೆಳಕಿನಲ್ಲಿ ನಾಲ್ಮಡಿಗೊಂಡಿತು.
ಇಲ್ಲಿನ ಪುರಾಣ ಪ್ರಸಿದ್ಧ ರಾಮೇಶ್ವರ ದೇವರ ತೆಪ್ಪೋತ್ಸವ ಭಾನುವಾರ ಜನಾಕರ್ಷಣೆಯ ಕೇಂದ್ರವಾಗಿ ಬದಲಾಗಿತ್ತು. ಅಂದಾಜು 50 ಸಾವಿರಕ್ಕೂ ಹೆಚ್ಚು ಜನ ಒಂದೂವರೆ ಗಂಟೆಗಳ ಕಾಲ ಪಟಾಕಿ ಪ್ರದರ್ಶನ ವೀಕ್ಷಿಸಿದರು. ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ತುಂಗಾ ನದಿಯಲ್ಲಿ ತಿರುಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮತ್ತೊಂದು ಕಡೆಯಲ್ಲಿ ತುಂಗಾರತಿ ವಿಶೇಷವಾಗಿ ಗಮನ ಸೆಳೆಯಿತು.
ರಾಮಚಂದ್ರ ಹಡಪದ, ಮೇಘನಾ ಕುಂದಾಪುರ, ಶ್ವೇತಾ ಪ್ರಭು ಅವರ ಸಂಗೀತ ಸಂಜೆ ಕಾರ್ಯಕ್ರಮ ಕಿವಿಗೆ ಇಂಪು ನೀಡಿದರೆ, ಕಾರ್ಗತ್ತಲ ಆಕಾಶ ಬೆಳಕಿನಿಂದ ವೈಭವವನ್ನು ಸೃಷ್ಟಿಸಿತ್ತು. ನದಿಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳು ತೇಲುತ್ತಿದ್ದವು. ಗೂಡು ದೀಪಗಳು ಭೂಮಿಯಿಂದ ಆಕಾಶವನ್ನು ಸ್ಪರ್ಷಿಸುತ್ತಿದ್ದವು. ಪ್ರಸಿದ್ಧ ಕುರುವಳ್ಳಿಯ ಕಮಾನು ಸೇತುವೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು.
ರಾಮೇಶ್ವರ ದೇವಸ್ಥಾನದಿಂದ ಹೊರಟ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ಪಟ್ಟಣದ ಪ್ರಮುಖ ಬೀದಿಯನ್ನು ತಲುಪಿತು. ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿ ನಮಿಸಿದರು. ರಾತ್ರಿ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸಂಧಾನ ಕಾರ್ಯಕ್ರಮ ನಡೆಯಿತು. ಪ್ರಧಾನ ತಂತ್ರಿ ವೇದಮೂರ್ತಿ ಲಕ್ಷ್ಮೀಶ ವಿ, ಪ್ರಧಾನ ಅರ್ಚಕ ಎಸ್.ರಾಜಶೇಖರ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದರು.
ಶಾಸಕ ಆರಗ ಜ್ಞಾನೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಸಹ ಸಂಚಾಲಕ ಟಿ.ಎಲ್.ಸುಂದರೇಶ್, ತಹಶೀಲ್ದಾರ್ ಎಸ್. ರಂಜಿತ್, ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ, ಮುಖ್ಯಾಧಿಕಾರಿ ಡಿ.ನಾಗರಾಜ ಇದ್ದರು.
ಶೌರ್ಯ ವಿಪತ್ತು ತಂಡದ ಕಾವಲು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡ ಮೂರು ದಿನಗಳ ವಿವಿಧ ಘಟಕಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. 80ಕ್ಕೂ ಹೆಚ್ಚು ಜನರ ತಂಡ ತೀರ್ಥಸ್ನಾನ, ರಥೋತ್ಸವ, ತೆಪ್ಪೋತ್ಸವ, ಅನ್ನದಾಸೋಹ ಸೇರಿದಂತೆ ವಿವಿಧ ಕಡೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.