ಶಿವಮೊಗ್ಗ: ‘ಒಳ ಮೀಸಲು ವರ್ಗೀಕರಣ ಖಂಡಿಸಿ’ ರಾಜ್ಯ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ, ಜಿಲ್ಲಾ ಘಟಕದ ಬಂಜಾರ ಸಂಘ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಿಲ್ಲೆಯ 180 ತಾಂಡಾಗಳ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಬಂಜಾರ ಸಮುದಾಯದ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಒಳ ಮೀಸಲು ವರ್ಗೀಕರಣವನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಆದ್ದರಿಂದ ಇದನ್ನು ಕೂಡಲೆ ರದ್ದು ಮಾಡಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಮೀಸಲು ಜಾರಿಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಂಜಾರ ಧರ್ಮಗುರು ಸೈನಾ ಭಗತ್ ಮಹಾರಾಜ್, ಶಾಸಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಶಾಸಕರಾದ ಪಿ. ರಾಜೀವ್, ಕೆ.ಬಿ ಅಶೋಕ್ ನಾಯ್ಕ, ಪ್ರಮುಖರಾದ ನಾಗೇಶ್ ನಾಯ್ಕ, ನಾನ್ಯಾನಾಯ್ಕ, ಶಿವುನಾಯ್ಕ ಸೇರಿದಂತೆ ಜಿಲ್ಲೆಯ ಎಲ್ಲ ತಾಂಡಾಗಳ ನಾಯಕ್, ಡಾವ್, ಕಾರಬಾರಿ, ವಿವಿಧ ಬಂಜಾರ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಕಾರಿಗಳು, ಬಂಜಾರ ಸಮುದಾಯದ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.