ADVERTISEMENT

ಸಿದ್ದರಾಮಯ್ಯ ಹೇಳಿಕೆ ಸಹಜ: ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 7:04 IST
Last Updated 21 ಏಪ್ರಿಲ್ 2019, 7:04 IST

ಶಿವಮೊಗ್ಗ: ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆ ಸಹಜ. ಅಧಿಕಾರದ ಆಸೆ ಎಲ್ಲರಿಗೂ ಇರುತ್ತದೆ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಅಧಿಕಾರ ಬೇಡ ಎನ್ನಲು ನಾವೂ ಸನ್ಯಾಸಿಗಳಲ್ಲ. ಶಾಪಗ್ರಸ್ಥರೂ ಅಲ್ಲ. ಅಧಿಕಾರದ ಆಸೆ ಎಲ್ಲರಿಗೂ ಇರುತ್ತದೆ. ಸಿದ್ದರಾಮಯ್ಯ ಅವರೂ ಸಹಜವಾಗಿ ಹೇಳಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

ಚುನಾವಣೆ ಮುಗಿದ ಮೇಲೆ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಮುಖಂಡರು ಬೊಗಳೆ ಬಿಡುತ್ತಿದ್ದಾರೆ. ಈ ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ. ಯಾರ ಕಾಟವೂ ಇಲ್ಲ, ಮಾಟವೂ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, .ಟಿ. ಶ್ರೀಕಂಠೇಗೌಡ ಮಾತನಾಡಿ, ರಾಷ್ಟ್ರರಾಜಕಾರಣದಲ್ಲಿ ದೇವೇಗೌಡರದ್ದೇ ನಿರ್ಣಾಯಕ ಪಾತ್ರ. ಹಾಗಾಗಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.

ಈ ಬಾರಿಯ ಲೋಕಸಭಾ ಚುನಾವಣೆ ಪ್ರಮುಖವಾಗಿದೆ. ಮೋದಿ ಸರ್ಕಾರಕ್ಕೆ ಕೊನೆ ಹಾಡಬೇಕಾಗಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರ ಪಾತ್ರ ಪ್ರಮುಖವಾಗಿದೆ. ಅವರಿಗೆ ಶಕ್ತಿ ತುಂಬುವ ಕೆಲಸವಾಗಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಾಲಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ರಾಮಕೃಷ್ಣ, ಫಾಲಾಕ್ಷಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.