ಶಿವಮೊಗ್ಗ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳ ಮೇಲೆ ನಿಯಂತ್ರಣದಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬಹಳ ದೊಡ್ಡ ಪಾಠ ಕಲಿಯಬೇಕಾಗುತ್ತದೆ. ಆ ನಿರ್ಧಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಸರಿಯಲಿ’ ಎಂದು ಮಾಜಿ ಶಾಸಕ, ಬಿಜೆಪಿಯ ಆರ್.ಕೆ.ಸಿದ್ರಾಮಣ್ಣ ಎಚ್ಚರಿಸಿದರು.
ಒಂದು ಸಮುದಾಯದ ಮತಬ್ಯಾಂಕ್ ಭದ್ರಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ನಿಯಂತ್ರಣಕ್ಕೆ ಮುಂದಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಎಐಸಿಸಿ ನಾಯಕ ರಾಹುಲ್‌ಗಾಂಧಿ ಅವರನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರಿಗೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಯು ವಿಭಜಕ ಮನಃಸ್ಥಿತಿ ಅನ್ನಿಸುವುದಿಲ್ಲ, ಭಯವನ್ನು ಸೃಷ್ಟಿಸುವುದಿಲ್ಲ. ಆದರೆ ಆರ್‌ಎಸ್‌ಎಸ್‌ನ ‘ಭಾರತ ಮಾತೆಗೆ ಜೈ’ ಎಂಬ ಘೋಷಣೆ ಆತಂಕ ಹುಟ್ಟಿಸಿದೆ ಎಂದು ಛೇಡಿಸಿದರು.
‘ಆರ್‌ಎಸ್‌ಎಸ್‌ನ ಶಾಖೆಗಳು ಹಾಗೂ ಬೈಠಕ್‌ಗಳಲ್ಲಿ ಸಂವಿಧಾನದಲ್ಲಿರುವ ಆಶಯಗಳನ್ನೇ ಹೇಳಿಕೊಡಲಾಗುತ್ತದೆ. ಹಾಗಿದ್ದರೂ ಸಂಘದ ಚಟುವಟಿಕೆ ನಿಯಂತ್ರಣಕ್ಕೆ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿರುವುದು ಖಂಡನೀಯ. ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸಾರ್ವಜನಿಕ ಸ್ಥಳದಲ್ಲಿ ನಿಷೇಧ ಹೇರಬಹುದು. ಆದರೆ ಸಂಘಟನೆಯ ಚಟುವಟಿಕೆಗಳ ನಿಷೇಧ ಸಾಧ್ಯವಿಲ್ಲ’ ಎಂದರು.
ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ, ಭ್ರಾತೃತ್ವ ಉಳಿಸುವುದೇ ಆರ್‌ಎಸ್‌ಎಸ್‌ನ ಮೂಲ ಉದ್ದೇಶ. ಸಂಘ ಹೇಳುವ ವಿಚಾರ ಸಂವಿಧಾನದಲ್ಲಿಯೇ ಅಡಕವಾಗಿದೆ ಎಂದು ಪುನರುಚ್ಚರಿಸಿದ ಸಿದ್ರಾಮಣ್ಣ,`ಹಿಂದೂ’ ಯಾವುದೇ ಮತ, ಪಂಥ ಅಲ್ಲ. ಬದಲಿಗೆ ಅದು ಎಲ್ಲರನ್ನೂ ಒಳಗೊಂಡ ಜೀವನ ವಿಧಾನ ಎಂದು ಹೇಳಿದರು.
‘ಸಂಘದ ಚಟುವಟಿಕೆ ವಿಭಜಕ ಅಲ್ಲ. ಅದು ಜನರು ಹಾಗೂ ಸಮಾಜವನ್ನು ಜೋಡಿಸುವ ಚಟುವಟಿಕೆ ಆಗಿದೆ. ಅವರು ಪತ್ರದಲ್ಲಿ ಉಲ್ಲೇಖಿಸಿರುವ ‘ದೊಣ್ಣೆ’ ಶಸ್ತ್ರಾಸ್ತ್ರ ಕಾಯ್ದೆಯಲ್ಲಿ ಬರುವುದಿಲ್ಲ ಎಂಬ ತಿಳಿವಳಿಕೆ ಪ್ರಿಯಾಂಕ್ ಖರ್ಗೆಗೆ ಇಲ್ಲದಿರುವುದು ದುರದೃಷ್ಟಕರ’ ಎಂದು ತಿಳಿಸಿದರು.
‘ಆರ್‌ಎಸ್‌ಎಸ್ ವಿರೋಧಿಸುವವರು ದೇಶದ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಸಂಘದ ನಿತ್ಯಶಾಖೆ ನಡೆಯುತ್ತಿರುತ್ತದೆ. ಅಲ್ಲಿಗೆ ಭೇಟಿ ನೀಡಿ ಆರ್‌ಎಸ್‌ಎಸ್‌ನ ಕಾರ್ಯ ಚಟುವಟಿಕೆಗಳನ್ನು ಗಮನಿಸಲಿ’ ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಎಸ್. ದತ್ತಾತ್ರಿ, ಮೋಹನ್‌ರೆಡ್ಡಿ, ಮಂಜುನಾಥ್ ನವಿಲೆ, ಹರಿಕೃಷ್ಣ, ಶ್ರೀನಾಥ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮುರಳಿ, ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.