ಶಿವಮೊಗ್ಗ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್) ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಘದ ಆಶ್ರಯದಿಂದ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಲು ಶಕ್ತಿ ಹೆಚ್ಚುತ್ತದೆ’ ಎಂದು ಸಂಘದ ಕರ್ನಾಟಕ, ಆಂಧ್ರ, ತೆಲಂಗಾಣ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದರು.
ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಆರ್‌ಎಸ್‌ಎಸ್ ಶತಮಾನೋತ್ಸವ ವಿಜಯದಶಮಿ ಪಥ ಸಂಚಲನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಂಘದ ಅಡಿಯಲ್ಲಿ ತಯಾರಾಗುವ ವ್ಯಕ್ತಿಗಳು ಸ್ವಾರ್ಥ ಮರೆತು ನಿಸ್ವಾರ್ಥ ಮನೋಭಾವ ಹೊಂದುತ್ತಾರೆ. ಸಮಾಜಕ್ಕಾಗಿ ಬದುಕಬೇಕು ಎನ್ನುವವರು ಸಂಘದಿಂದ ತಯಾರಾಗುತ್ತಾರೆ. ಸಂಘಕ್ಕೆ 100 ವರ್ಷ ತುಂಬಿದೆ. ಯಾವುದೇ ಒಂದು ಸಂಘಟನೆ ನಿರಂತರ ಕೆಲಸ ಮಾಡುವುದು ಸುಲಭವಲ್ಲ. ಈಗ ಸಂಘ ಜಗತ್ತಿನ 55 ದೇಶಗಳಲ್ಲಿ 43 ಶಾಖೆಗಳನ್ನು ಹೊಂದಿದೆ ಎಂದರು.
ಸಂಘ ಆರಂಭಗೊಂಡಾಗ ಹಿಂದೂ ಎಂಬ ಅಸ್ಮಿತೆ ಸಂಕುಚಿತದಿಂದ ಕೂಡಿತ್ತು. ಅಂದು ಈ ರೀತಿಯ ಮಾನಸಿಕತೆ ಇತ್ತು. ಈಗ ಸಮಾಜ ಜಾಗೃತಗೊಂಡಿದೆ. ಹಿಂದೂ ಎನ್ನಲು ಹೆಮ್ಮೆಪಡುವ ಸ್ಥಿತಿ ಇದೆ. ಸಾಮಾಜಿಕವಾಗಿ ಅನೇಕ ಬದಲಾವಣೆ ಸಂಘ ತಂದಿದೆ ಎಂದು ಹೇಳಿದರು.
ದೇಶವ್ಯಾಪಿ ಕೋಟ್ಯಂತರ ಜನರನ್ನು ತಯಾರು ಮಾಡಲು ಸಂಘ ಶ್ರಮಿಸಿದೆ. ಸಂಘಕ್ಕೆ ಸೇರಲು ಅರ್ಜಿ ಹಾಕುವ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಸಂಘಕ್ಕೆ ಬರಬಹುದು. ಎಲ್ಲ ಸ್ತರಕ್ಕೂ ಕಾರ್ಯಕರ್ತರನ್ನು ಸಂಘ ನೀಡಿದೆ. ದೇಶದ ಪ್ರಧಾನಿ ಹುದ್ದೆಯಿಂದ ಹಿಡಿದು ಮುಖ್ಯಮಂತ್ರಿ, ಸಭಾಪತಿ ಸೇರಿದಂತೆ ಸಾವಿರಾರು ಜನರಿಗೆ ಸೇವೆ ಸಲ್ಲಿಸಲು ಸಂಘದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಹಿಂದೂಗಳು ಸಂಘಟಿತರಾಗಬಹುದು ಎಂದು ಸಂಘ ತೋರಿಸಿದೆ. ದೇಶಕ್ಕೆ ಆಪತ್ತು ಬಂದಾಗ ಸಂಘದ ಎಲ್ಲರೂ ಕಾರ್ಯ ನಿರ್ವಹಿಸಿದ್ದಾರೆ. 100 ವರ್ಷದಲ್ಲಿ ವ್ಯಕ್ತಿಗಳನ್ನು ನಿರ್ಮಾಣ ಮಾಡಿ, ಹಿಂದೂ ಎಂದರೆ, ಸಂಘಟಿತನಾಗಬಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.
ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಸಂಘ ಚಾಲಕರಾದ ರಂಗನಾಥ, ಲೋಕೇಶ್ವರ ಕಾಳೆ, ಗಿರೀಶ್ ಇದ್ದರು.
ಡಿ.7 ರಿಂದ ಜಾಗೃತಿ ಅಭಿಯಾನ
‘ಡಿ.7 ರಿಂದ ಮನೆಮನೆಗೆ ತೆರಳಿ 100 ವರ್ಷದಲ್ಲಿ ಸಮಾಜ ಪರಿವರ್ತನೆಯಲ್ಲಿ ಸಂಘ ಮಾಡಿದ ಸಾಧನೆ ಹಾಗೂ ಸಂಘದ ಮುಂದಿನ ಉದ್ದೇಶವನ್ನು ತಿಳಿಸಿ ಜಾಗೃತಿ ಮೂಡಿಸಲಾಗುವುದು’ ಎಂದು ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದರು. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ ದೇವಾಲಯಗಳಿಗೆ ಪ್ರವೇಶ ಸೇರಿದಂತೆ ಎಲ್ಲರೂ ಸಮಾನರು ಎನ್ನುವ ಭಾವನೆಯನ್ನು ಹುಟ್ಟುಹಾಕಬೇಕು. ಇದು ಸಂಘದ ಉದ್ದೇಶ. ಸ್ವದೇಶಿ ವಸ್ತುಗಳನ್ನು ಬಳಸಬೇಕು ಮಾತೃಭಾಷೆಯಲ್ಲಿ ಸಂವಹನ ನಡೆಸಬೇಕು. ನಡವಳಿಕೆಯ ಶಿಕ್ಷಣ ನೀಡಬೇಕು. ಕಾನೂನು ಪಾಲನೆ ಮಾಡಬೇಕು. ನಾಗರಿಕ ಕರ್ತವ್ಯ ಎಲ್ಲರೂ ಅನುಸರಿಸಬೇಕು– ಹೀಗೆ ಅನೇಕ ಸಂಗತಿಗಳೊಂದಿಗೆ ತೆರಳಿ ಅರಿವು ಮೂಡಿಸಲಾಗುವದು ಎಂದರು. ಜಿಲ್ಲೆಯಲ್ಲಿ ಹಿಂದೂ ಸಮಾವೇಶಗಳು ಆಗಬೇಕು. ಇದಕ್ಕೆ ಸಮಿತಿಗಳು ರಚನೆ ಆಗಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದ ಎಲ್ಲರೂ ಸೇರಿ ಜಾಗೃತಿ ಮೂಡಿಸಬೇಕು. ಸಮಲೋಚನಾ ಗೋಷ್ಟಿಗಳು ಆಗಬೇಕು. ತಾಲ್ಲೂಕು ಮಟ್ಟ ಸೇರಿ ಎಲ್ಲಾ ಮಂಡಲದಲ್ಲೂ ಶಾಖೆಗಳನ್ನು ತೆರೆಯಬೇಕು ಎಂದರು.
ಪಥಸಂಚಲನ: 2800 ಸ್ವಯಂ ಸೇವಕರು ಭಾಗಿ
ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಆಕರ್ಷಕ ಪಥ ಸಂಚಲನ ನೋಡುಗರ ಗಮನ ಸಳೆಯಿತು. ಎಸ್‌ಪಿಎಂ ರಸ್ತೆಯ ಕೋಟೆ ಮಾರಿಕಾಂಬಾ ದೇವಸ್ಥಾನದ ಆವರಣದಿಂದ ಸಂಜೆ 5 ಗಂಟೆಗೆ ಆರಂಭವಾದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಮಣ್ಣ ಶ್ರೇಷ್ಠಿ ಪಾರ್ಕ್ ಗಾಂಧಿ ಬಜಾರ್ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿ ಸಂಪನ್ನಗೊಂಡಿತು. 2800ಕ್ಕೂ ಹೆಚ್ಚು ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಕೇಸರಿ ಧ್ವಜ ತೋರಣ ಕಮಾನುಗಳು ರಸ್ತೆ ಮೇಲೆ ಬಿಡಿಸಿದ ರಂಗೋಲಿ ಗಮನ ಸೆಳೆದವು. ಶಿವಪ್ಪನಾಯಕ ಪ್ರತಿಮೆ ಎದುರು ಮಂಟಪ ನಿರ್ಮಿಸಿ ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಎರಡನೇ ಸರಸಂಘ ಚಾಲಕ ಎಂ.ಎಸ್.ಗೋಲ್ವಾಲ್ಕರ್ ಭಾವಚಿತ್ರ ಇರಿಸಲಾಗಿತ್ತು. ಅಮಿರ್ ಅಹಮ್ಮದ್ ವೃತ್ತದಲ್ಲಿ ಭಾರತ ಮಾತೆಯ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಪಥ ಸಂಚಲನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರ ಮೇಲೆ ಪುಷ್ಪವೃಷ್ಟಿ ಸುರಿಸಲಾಯಿತು. ಇದಕ್ಕೆ 4000 ಕೆ.ಜಿ. ಹೂ ಬಳಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.