ADVERTISEMENT

ಸಾಗರವನ್ನು ಜಿಲ್ಲಾ ಕೇಂದ್ರವೆಂದು ಘೋಷಿಸಿ: ವಿವಿಧ ಪಕ್ಷ, ಸಂಘ ಸಂಸ್ಥೆಗಳ ಒತ್ತಾಯ

ವಿವಿಧ ರಾಜಕೀಯ ಪಕ್ಷ, ಸಂಘ –ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 6:38 IST
Last Updated 9 ಸೆಪ್ಟೆಂಬರ್ 2025, 6:38 IST
ಸಾಗರದಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘ–ಸಂಸ್ಥೆಗಳ ಪ್ರಮುಖರು ಸಭೆ ಸೇರಿ ಸಾಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಒತ್ತಾಯಿಸಿದರು
ಸಾಗರದಲ್ಲಿ ವಿವಿಧ ರಾಜಕೀಯ ಪಕ್ಷ, ಸಂಘ–ಸಂಸ್ಥೆಗಳ ಪ್ರಮುಖರು ಸಭೆ ಸೇರಿ ಸಾಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಒತ್ತಾಯಿಸಿದರು   

ಸಾಗರ: ಇಲ್ಲಿನ ಗಾಂಧಿ ಮೈದಾನದಲ್ಲಿರುವ ನಗರಸಭೆ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ನಡೆದ ವಿವಿಧ ರಾಜಕೀಯ ಪಕ್ಷ, ಸಂಘ–ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಸಾಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸಲಾಯಿತು.

ಕೇಂದ್ರ ಸರ್ಕಾರ 2026ನೇ ಸಾಲಿನ ಏಪ್ರಿಲ್ 1 ರಿಂದ ಜನಗಣತಿ ಆರಂಭಿಸಲಿದ್ದು, ನೂತನ ಜಿಲ್ಲೆಗಳನ್ನು ರಚಿಸುವುದಾದರೆ ಅಷ್ಟರೊಳಗೆ ಪ್ರಕ್ರಿಯೆ ಮುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸುವುದಾದರೆ ಸಾಗರವನ್ನೇ ಜಿಲ್ಲಾ ಕೇಂದ್ರವೆಂದು ಘೋಷಿಸಬೇಕು ಎಂಬ ಒತ್ತಾಯವನ್ನು ಸರ್ಕಾರದ ಮೇಲೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.

‘ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಲು ಮುಂದಾಗಿದ್ದರು. ಆಗ ಸಾಹಿತಿ ನಾ. ಡಿಸೋಜ ಅವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ವತಿಯಿಂದ ಪ್ರತಿಭಟನೆ ನಡೆದ ನಂತರ ಆ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು’ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ತಿಳಿಸಿದರು.

ADVERTISEMENT

‘ಸಾಗರಕ್ಕೆ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇದೆ. ಇದೊಂದು ಹೊಸನಗರ, ಸೊರಬ, ಶಿಕಾರಿಪುರ ತಾಲ್ಲೂಕು ಸೇರಿದ ಉಪವಿಭಾಗೀಯ ಕೇಂದ್ರವಾಗಿದೆ. ಭೌಗೋಳಿಕವಾಗಿಯೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಸೂಕ್ತವಾಗಿದೆ’ ಎಂದು ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ರಾಜನಂದಿನಿ ಕಾಗೋಡು ಹೇಳಿದರು.

‘ಸಾಗರ ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ತಾಣವಾಗಿದೆ. ಜೋಗ, ಸಿಗಂದೂರು, ಇಕ್ಕೇರಿ, ಕೆಳದಿ, ಹೊನ್ನೇಮರಡು, ವರದಹಳ್ಳಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ಇಲ್ಲಿವೆ. ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದಲೂ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸುವುದು ಸರಿಯಾದ ನಡೆಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

‘ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂಬ ಹೋರಾಟಕ್ಕೆ ತಾಲ್ಲೂಕಿನಾದ್ಯಂತ ಬೆಂಬಲ ವ್ಯಕ್ತವಾಗಿದೆ. ಸೆ. 18ರಂದು ಸರ್ಕಾರದ ಗಮನ ಸೆಳೆಯಲು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುಂದರ್ ಸಿಂಗ್ ಹೇಳಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಕಲಸೆ ಚಂದ್ರಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಮಹ್ಮದ್ ಖಾಸಿಂ, ಗಿರೀಶ್ ಕೋವಿ, ಕನ್ನಪ್ಪ ಬೆಳಲಮಕ್ಕಿ, ಕೆ.ವಿ. ಜಯರಾಮ್, ಅಶ್ವಿನಿ ಕುಮಾರ್, ಮಂಜಪ್ಪ ಹಿರೇನೆಲ್ಲೂರು, ಆನಂದ್, ಮಂಜುನಾಥ್, ನಾಗರಾಜ್, ಮಹಾಬಲ ಕೌತಿ , ತುಕಾರಾಂ ಶಿರವಾಳ, ರವಿ ಕುಗ್ವೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.