ADVERTISEMENT

ಇತಿಹಾಸದ ದಾಖಲೆಯಲ್ಲಾದ ಲೋಪ ಸರಿಪಡಿಸಿ: ಕೆಳದಿ ವೆಂಕಟೇಶ್ ಜೋಯಿಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:53 IST
Last Updated 4 ಜನವರಿ 2026, 4:53 IST
ಸಾಗರದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಇತಿಹಾಸ ಸಮ್ಮೇಳನ ನಡೆಯಿತು.
ಸಾಗರದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಇತಿಹಾಸ ಸಮ್ಮೇಳನ ನಡೆಯಿತು.   

ಸಾಗರ : ಕೆಳದಿ ಸಾಮ್ರಾಜ್ಯ ಸೇರಿದಂತೆ ಕರ್ನಾಟಕದ ಸ್ಥಳೀಯ ಇತಿಹಾಸಗಳನ್ನು ದಾಖಲಿಸುವಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕಿದೆ ಎಂದು ಇತಿಹಾಸ ಸಂಶೋಧಕ ಕೆಳದಿ ವೆಂಕಟೇಶ್ ಜೋಯಿಸ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲ್ಲೂಕು ಇತಿಹಾಸ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕೆಳದಿ ರಿಸರ್ಚ್ ಫೌಂಡೇಷನ್, ಲಯನ್ಸ್ ಕ್ಲಬ್ ಶನಿವಾರ ಏರ್ಪಡಿಸಿದ್ದ 7 ನೇ ತಾಲ್ಲೂಕು ಮಟ್ಟದ ಇತಿಹಾಸ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಳದಿ ಸಾಮ್ರಾಜ್ಯವನ್ನು 25 ವರ್ಷಗಳ ಕಾಲ ಆಳಿದ ರಾಣಿ ಚೆನ್ನಮ್ಮಾಜಿ ಶಿವಾಜಿಯ ಪುತ್ರ ರಾಜರಾಮನಿಗೆ ಹೈದರಾಲಿ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಆಶ್ರಯ ನೀಡಿದ್ದರು. ಕೆಳದಿ ಅರಸರು ಯುದ್ಧಗಳಲ್ಲಿ ಸೋತ ಘಟನೆ ಮಾತ್ರ ಇತಿಹಾಸದಲ್ಲಿ ದಾಖಲಾಗಿದ್ದು ಆಶ್ರಯ ನೀಡಿದ ಸಂಗತಿಗಳು ಉಲ್ಲೇಖವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಇತಿಹಾಸವನ್ನು ಮರೆತರೆ ನಾವು ಉಜ್ವಲವಾದ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಜಗತ್ತಿಗೆ ಮಾದರಿಯಾದ ಇತಿಹಾಸ ನಮ್ಮ ದೇಶ ಹಾಗೂ ನಮ್ಮ ನಾಡಿನಲ್ಲಿ ಗತಿಸಿ ಹೋಗಿದೆ. ಇವುಗಳ ಮೇಲೆ ಹೊಸ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಯುವ ಸಂಶೋಧಕರು ಅಧ್ಯಯನ ನಡೆಸಬೇಕಿದೆ ಎಂದು ಅವರು ಹೇಳಿದರು.

ಕೆಳದಿ ರಾಣಿ ಚೆನ್ನಮ್ಮಾಜಿ, ಚೆನ್ನಭೈರಾದೇವಿಯಂತಹ ಮಹಿಳೆಯರು ಕನ್ನಡ ನಾಡಿನ ಕೀರ್ತಿಯನ್ನು ಪ್ರಭಾವಿಸುವ ರೀತಿಯಲ್ಲಿ ಆಡಳಿತ ನಡೆಸಿ ತೋರಿಸಿದ್ದಾರೆ. ಹೀಗಾಗಿ ಈ ನೆಲವನ್ನು ಗಂಡು ಮೆಟ್ಟಿನ ನಾಡು ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದು ‘ಭಾರತೀಯ ಚರಿತ್ರೆ ರಚನೆಯಲ್ಲಿ ಸ್ಥಳೀಯ ಇತಿಹಾಸದ ಪಾತ್ರ’ ಕುರಿತು ಮಾತನಾಡಿದ ಹಂಪಿ ವಿವಿ ಅಧ್ಯಯನಾಂಗ ವಿಭಾಗದ ನಿರ್ದೇಶಕ ಅಮರೇಶ್ ಯತಗಲ್ ಹೇಳಿದರು.

ಸ್ಥಳೀಯ ಇತಿಹಾಸದ ಮಹತ್ವವನ್ನು ಅರಿತು ಅದನ್ನು ಸರಿಯಾದ ರೀತಿಯಲ್ಲಿ ದಾಖಲಿಸಿದಾಗ ಮಾತ್ರ ಇತಿಹಾಸವನ್ನು ಸಮಗ್ರವಾಗಿ ರೂಪಿಸಿದಂತಾಗುತ್ತದೆ. ಇತಿಹಾಸಕ್ಕೆ ಸಂಬಂಧಪಟ್ಟ ಅಪರೂಪದ ಪುರಾತನ ವಸ್ತುಗಳನ್ನು ನಾಶಪಡಿಸುವ ಮನೋಭಾವ ಸಲ್ಲ ಎಂದರು.

‘ಹಸೆ ಚಿತ್ತಾರ-ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ’ ಕುರಿತು ಇತಿಹಾಸ ಸಂಶೋಧನಾ ವಿದ್ಯಾರ್ಥಿ ರವಿಚಂದ್ರ ಮಂಡಗಳಲೆ ಉಪನ್ಯಾಸ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಪ್ರಭಾಕರ್ ರಾವ್, ಪ್ರಸನ್ನ ಟಿ. ಶ್ರೀಪಾದ ಹೆಗಡೆ, ಕೆ.ಸಿದ್ದಪ್ಪ, ಉಮೇಶ್ ಹಿರೇನೆಲ್ಲೂರು, ಲಕ್ಷ್ಮಣ್ ಆರ್ . ನಾಯ್ಕ್ ಇದ್ದರು.

ಆಶಾ ಹೆಗಡೆ ಪ್ರಾರ್ಥಿಸಿದರು. ಸತೀಶ್ ಆರ್. ಸ್ವಾಗತಿಸಿದರು. ಡಿ.ಗಣಪತಪ್ಪ ವಂದಿಸಿದರು. ಎಚ್.ಜಿ.ಸುಬ್ರಮಣ್ಯ ಭಟ್ ನಿರೂಪಿಸಿದರು.