ADVERTISEMENT

ಕೋಣಂದೂರು| ಅನೇಕತೆಯಲ್ಲಿ ಏಕತೆ ಸಾಧಿಸುವುದೇ ಸಂಕ್ರಾಂತಿ: ಕಾಶೀ ಜಗದ್ಗುರುಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:04 IST
Last Updated 15 ಜನವರಿ 2026, 3:04 IST
ಕೋಣಂದೂರಿನ ಬೃಹನ್ಮಠದಲ್ಲಿ ಗುರುವಾರ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಸಮಾರೋಪ ಮತ್ತು ಸಂಕ್ರಾಂತಿ ಧರ್ಮ ಸಮಾರಂಭದಲ್ಲಿ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು
ಕೋಣಂದೂರಿನ ಬೃಹನ್ಮಠದಲ್ಲಿ ಗುರುವಾರ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಸಮಾರೋಪ ಮತ್ತು ಸಂಕ್ರಾಂತಿ ಧರ್ಮ ಸಮಾರಂಭದಲ್ಲಿ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು   

ಕೋಣಂದೂರು: ‘ಭಾರತದಲ್ಲಿ ಹಲವು ಜಾತಿ, ಮತ, ಭಾಷೆ, ಪ್ರದೇಶ, ವಿವಿಧ ಸಂಸ್ಕೃತಿಗಳಿದ್ದರೂ ಹಬ್ಬ ಹರಿದಿನಗಳ ಮೂಲಕ ಏಕತೆಯನ್ನು ಸಾಧಿಸುವ ಪರಿಪಾಟವನ್ನು ನಮ್ಮ ಋಷಿ-ಮುನಿಗಳು ಹಾಕಿಕೊಟ್ಟಿದ್ದಾರೆ. ಅನೇಕತೆಯಲ್ಲಿ ಏಕತೆ ಸಾಧಿಸುವುದೇ ನಿಜವಾದ ಸಂಕ್ರಾಂತಿ’ ಎಂದು ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಸಮಾರೋಪ ಮತ್ತು ಸಂಕ್ರಾಂತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಂಕ್ರಾಂತಿ ಹಬ್ಬದಂದು ಸಮುದ್ರ ಸ್ನಾನ, ಸಂಗಮ ಸ್ನಾನ ಮಾಡಬೇಕೆಂಬ ನಿಯಮವಿದೆ. ಸಂಗಮ ಸ್ನಾನದ ಸಾಂಕೇತಿಕ ಅರ್ಥ. ದೇಶ, ಧರ್ಮಕ್ಕಾಗಿ ಎಲ್ಲರೂ ಒಂದಾಗಿ ಹೋಗುವುದು ಎಂದರ್ಥ. ನದಿಗಳು ಭಿನ್ನ ಪ್ರದೇಶದಲ್ಲಿ ಹುಟ್ಟಿದರೂ ನಿಗದಿತ ಸ್ಥಳದಲ್ಲಿ ಸೇರಿದ ಮೇಲೆ ಅವು ಸಾಗರವನ್ನು ಸೇರುವವರೆಗೆ ಎಂದಿಗೂ ಮತ್ತೆ ಬೇರೆ ಆಗದಂತೆ ಕೂಡಿಕೊಂಡೇ ಹರಿಯುತ್ತವೆ. ಇಂತಹ ಏಕತೆಯನ್ನು ಮೈಗೂಡಿಸಿಕೊಳ್ಳುವುದಕ್ಕಾಗಿಯೇ ಸಂಗಮ ಸ್ನಾನ ಮಾಡುವ ಪದ್ಧತಿ ರೂಢಿಗೆ ಬಂದಿದೆ. ಕೋಣಂದೂರು ಮಠದಲ್ಲೂ ಭಕ್ತರು ಸಂಗಮ ಸ್ನಾನ ಮಾಡಿದ್ದಾರೆ. ಅದು ಹೇಗೆಂದರೆ ಇಲ್ಲಿರುವ ಹತ್ತಾರು ಶಿವಾಚಾರ್ಯರು ಒಂದೊಂದು ನದಿಗಳಿದ್ದಂತೆ ಅವರೆಲ್ಲರೂ ಕೂಡಿ ಸಮುದ್ರದೋಪಾದಿಯಲ್ಲಿ ಆಗಮಿಸಿರುವ ಜಗದ್ಗುರುಗಳ ಸಾನ್ನಿಧ್ಯವನ್ನು ಸೇರಿದ್ದಾರೆ. ಇಲ್ಲಿ ದೊರೆತ ಜ್ಞಾನ ಗಂಗೆಯಲ್ಲಿ ಮಿಂದು ನೀವೆಲ್ಲಾ ಜೀವನದಲ್ಲಿ ದೇಶ, ಧರ್ಮಕ್ಕಾಗಿ ಒಂದಾಗಿ ಸಾಗುವಂತಾಗಲಿ’ ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಹತ್ತಿಗೆರೆಯ ಕೆ.ಎಂ.ಇಂದುಕುಮಾರ್ ಅವರಿಗೆ ಶಿವಲಿಂಗ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕ್ಯಾಸನೂರು, ಬನವಾಸಿ ಮತ್ತಿತರ ಮಠಗಳ ಸ್ವಾಮೀಜಿಗಳು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ್, ಹಾರೋಹಿತ್ತಲು ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.