ADVERTISEMENT

ಸಂತ ಸೇವಾಲಾಲರ ಹಾದಿಯಲ್ಲಿ ನಡೆಯೋಣ

ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕೆ.ನಾಗೇಂದ್ರ ನಾಯ್ಕ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 4:21 IST
Last Updated 16 ಫೆಬ್ರುವರಿ 2023, 4:21 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗರಾಜ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಬುಧವಾರ ನಡೆದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗರಾಜ್ ಉದ್ಘಾಟಿಸಿದರು   

ಶಿವಮೊಗ್ಗ: ಸಂತ ಸೇವಾಲಾಲರು ವೀರರು, ಸಮಾಜ ಸುಧಾರಕರು ಹಾಗೂ ಮೇರು ವ್ಯಕ್ತಿಗಳಾಗಿದ್ದು, ಅವರನ್ನು ಪೂಜೆಗೆ ಸೀಮಿತಗೊಳಿಸದೆ ಅವರ ಹಾದಿಯಲ್ಲಿ ನಾವು ನಡೆಯುವಂತಾಗಬೇಕು ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ನಾಗೇಂದ್ರ ನಾಯ್ಕ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘದ ಆಶ್ರಯದಲ್ಲಿ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬಂಜಾರ ಸಮಾಜದ ಸದ್ಗುರು ಸಂತ ಸೇವಾಲಾಲರು 1739ರ ಫೆಬ್ರುವರಿ 15ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನ ಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಯಾಡಿ ದಂಪತಿಗೆ ಜನಿಸಿದರು. ಸೇವಾಲಾಲರು ಶ್ರೀಮಂತ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದವರಾಗಿದ್ದು, ಹಿಂದೆ ಅವರು ಲಗಾಣಿಗಳೆಂಬ ಸಾಮಾನು ಸರಂಜಾಮುಗಳನ್ನು ಹೊತ್ತು ತಿರುಗುವ ಬಂಡಿಗಳ ಮೂಲಕ ದೇಶದ ಮುಖ್ಯ ವ್ಯಾಪಾರ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿ ವ್ಯಾಪಾರ ಮಾಡುತ್ತಿದ್ದರು. ಸೂರಗೊಂಡನ ಕೊಪ್ಪವನ್ನು ವ್ಯಾಪಾರದ ಲಗಾಣಿಯ ಮಾರ್ಗವೆಂದು ಗುರುತಿಸಲಾಗಿದೆ ಎಂದರು.

ADVERTISEMENT

ಬಂಜಾರರನ್ನು ಗೋರ್ ಮಾಟಿಗಳೆಂದು ಸಹ ಕರೆಯಲಾಗುತ್ತದೆ. ಗೋ ಅಂದರೆ ಗೋವು, ಗೋವುಗಳನ್ನು ರಕ್ಷಿಸುವ ಸಮಾಜ ಎಂದು ಗುರುತಿಸಲಾಗುತ್ತದೆ. ಹೀಗೆ ಬಂಜಾರರನ್ನು 30ಕ್ಕೂ ಹೆಚ್ಚು ಪದಗಳಿಂದ ಕರೆಯಲಾಗುತ್ತದೆ. ದೇಶದಾದ್ಯಂತ ಸಂತ ಸೇವಾಲಾಲರ ಪವಿತ್ರ ಸ್ಥಳಗಳು ಇದ್ದು, ಬಂಜಾರ ಸಮಾಜ ಹಾಗೂ ಸಂತ ಸೇವಾಲಾಲರ ಇತಿಹಾಸವನ್ನು ಪ್ರಚುರಪಡಿಸಬೇಕಿದೆ ಎಂದು ತಿಳಿಸಿದರು.

‘ಧರ್ಮದ ಕಲ್ಪನೆ ಇಲ್ಲದ ಸಂದರ್ಭದಲ್ಲಿ ಬಂಜಾರ ಧರ್ಮ ಸ್ಥಾಪನೆ ಮಾಡಿದವರು ದೇಮಾ ಗುರು. ಇವರು ಸೇವಾಲಾಲರ ಗುರುಗಳು. ನಂತರ ಸೇವಾಲಾಲರು ಈ ಗುರು ಪರಂಪರೆ ಮುಂದುವರಿಸಿಕೊಂಡು, ಸಮಾಜ ಸುಧಾರಕರಾಗಿ, ವೀರರಾಗಿ ಮುಂದುವರಿಯುತ್ತಾರೆ. ಸೇವಾಲಾಲರನ್ನು ಒಬ್ಬ ಪವಾಡ ಪುರುಷನೆಂದು ಉಲ್ಲೇಖಿಸಲಾಗಿದೆ. ಆದರೆ ಅವರೊಬ್ಬ ಮೇರು ವ್ಯಕ್ತಿ ಹಾಗೂ ಆದರ್ಶ ಪುರುಷ. ಇಂತಹ ಮಹಾನ್‍ ಪುರುಷನನ್ನು ಪೂಜಿಸಿ ದೈವತ್ವಕ್ಕೆ ಏರಿಸುವುದಕ್ಕಿಂತ ಅವರ ತತ್ವ, ಇತಿಹಾಸ ಪ್ರಚುರಪಡಿಸಬೇಕು ಹಾಗೂ ಅಳವಡಿಸಿಕೊಳ್ಳಬೇಕು’ ಎಂದರು.

‘ನನಗೂ ಸಂತ ಸೇವಾಲಾಲ್ ಜಯಂತಿಗೂ ಅವಿನಾಭಾವ ಸಂಬಂಧ ಇದೆ. ಹೊನ್ನಾಳಿ ತಾಲ್ಲೂಕು ತಹಶೀಲ್ದಾರ್ ಆಗಿದ್ದಾಗ ಸೂರಗೊಂಡನಕೊಪ್ಪದ ಭಾಯಾಗಡ್‍ನಲ್ಲಿ ಅತ್ಯಂತ ಉತ್ಸುಕತೆಯಿಂದ ಸೇವಾಲಾಲ್ ಜಯಂತಿ ಸಿದ್ಧತೆ ಮತ್ತು ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಡಾ.ನಾಗರಾಜ್ ಸ್ಮರಿಸಿದರು.

ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿರುವ ಬಂಜಾರ ಸೇವಾಲಾಲ್ ಸಮುದಾಯ ಭವನ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆಯನೂರು ಶಿವನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಜಗದೀಶ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಂದಿನಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.