ಕಾರ್ಗಲ್: ಡಿಸೆಂಬರ್ ತಿಂಗಳು ಬಂತೆಂದರೆ ಸಮೀಪದ ಜೋಗ ಜಲಪಾತದಲ್ಲಿ ಶಾಲಾ ಮಕ್ಕಳ ಕಲರವ ಕಂಡು ಬರುತ್ತದೆ.
ಶಾಲಾ ಪ್ರವಾಸದ ನಿಮಿತ್ತ ಪ್ರತಿನಿತ್ಯ ಹತ್ತಾರು ಬಸ್ಸುಗಳಲ್ಲಿ ಆಗಮಿಸುವ ಶಾಲಾ ಮಕ್ಕಳು ಸಾಲಾಗಿ ಸಾಗಿ ಜಲಪಾತದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ... ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಕವಿ ವಾಣಿಯನ್ನು ಶಿಕ್ಷಕರು ನೆನಪಿಸುವುದು ಸಾಮಾನ್ಯ.
ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಜಲಪಾತ ವೀಕ್ಷಣೆಗೆ ಸಿದ್ಧಗೊಂಡಿರುವ ವೀಕ್ಷಣಾ ಗೋಪುರಗಳು ಇನ್ನೂ ಲೋಕಾರ್ಪಣೆಯಾಗದ ಕಾರಣ ಶಾಲಾ ಮಕ್ಕಳು ಪ್ರವಾಸಿ ತಾಣದ ಕೊನೆಯ ವೀಕ್ಷಣಾ ಘಟ್ಟ ಮಯೂರ ಹೋಟೆಲ್ ಹಿಂಭಾಗಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲಿಂದ ಶರಾವತಿ ಕೊಳ್ಳದ ರಮ್ಯ ನೋಟವನ್ನೂ ಕಾಣಬಹುದಾಗಿದೆ. ಜೋಗ ಜಲಪಾತದ ಜೊತೆಗೆ ಮಹಾತ್ಮ ಗಾಂಧಿ ಜಲವಿದ್ಯುದಾಗರ, ಅಂಬುತೀರ್ಥ ಜಲವಿದ್ಯುದಾಗರಕ್ಕೆ ನೀರು ಪೂರೈಸುವ ಮಿನಿ ಅಣೆಕಟ್ಟೆಯನ್ನೂ ವೀಕ್ಷಿಸಿ ವಿದ್ಯಾರ್ಥಿಗಳು ಸಂತಸ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.