ADVERTISEMENT

ಬೆಂಗಳೂರಿಗೆ ಶರಾವತಿ: ಬಿಜೆಪಿ, ಕಾಂಗ್ರೆಸ್‌ ಕೈವಾಡ

ಮಲೆನಾಡಿನ ಜೀವಜಲ ಹೋರಾಟ ಸಮಿತಿ ಮುಖಂಡರ ಆರಓ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 11:25 IST
Last Updated 25 ಜೂನ್ 2019, 11:25 IST
   

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದಬೆಂಗಳೂರಿಗೆ ಶರಾವತಿ ನದಿ ನೀರು ಹರಿಸಲು ರೂಪಿಸುತ್ತಿರುವ ಯೋಜನೆ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಇವೆ ಎಂದು ಮಲೆನಾಡಿನ ಜೀವಜಲ ಹೋರಾಟ ಸಮಿತಿ ಮುಖಂಡರು ಆರೋಪಿಸಿದರು.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ನಗರಕ್ಕೆ ನೀರು ಹರಿಸುವ ಯೋಜನೆಯೇ ಅವೈಜ್ಞಾನಿಕ. ಇದು ಸರ್ಕಾರದ ಕೆಟ್ಟ ನಿರ್ಧಾರ. ಈ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿದ್ದೇ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಈಗಿನ ಸರ್ಕಾರ ಅದನ್ನು ಮುಂದುವರಿಸುತ್ತಿದೆ ಎಂದು ಸಮಿತಿ ಮುಖಂಡ ಕೆ.ಟಿ.ಗಂಗಾಧರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಯೋಜನೆ ಕುರಿತು ಇದುವರೆಗೂ ಚಕಾರ ಎತ್ತಿಲ್ಲ. ಉಪ ಮುಖ್ಯಮಂತ್ರಿ ಒಬ್ಬರೇ ಸಭೆ ನಡೆಸಿ, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಆದೇಶ ಕೊಟ್ಟಿದ್ದಾರೆ. ಹಾಗಾದರೆ ಇದರ ಹಿಂದಿನ ಮರ್ಮವೇನು ಎಂದು ಪಶ್ನಿಸಿದರು.

ಬೆಂಗಳೂರು ವಿಕೃತವಾಗಿ ಬೆಳೆಯುತ್ತಿದೆ. ಇಡೀ ರಾಜ್ಯದ ನದಿಗಳ ನೀರು ಅಲ್ಲಿಗೆ ಹರಿಸಿದರೂ ಬೇಡಿಕೆ ಈಡೇರಿಕೆ ಅಸಾಧ್ಯ ಎನ್ನುವ ಸ್ಥಿತಿ ಇದೆ. ಭೂಗತ ದೊರೆಗಳು ಹೊಸ ಹೊಸ ಬಡಾವಣೆ ಮಾಡುತ್ತಿದ್ದಾರೆ. ಬೆಂಗಳೂರು ಅಡ್ಡದಿಡ್ಡಿಯಾಗಿ ಬೆಳೆಯುತ್ತಿದೆ. ಈ ಬೆಳವಣಿಗೆ ತಡೆಯದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ವಿವಿಧ ಸಂಘಟನೆಗಳು ನೀರು ಹರಿಸುವುದನ್ನು ವಿರೋಧಿಸಿ ಜೂನ್‌ 10ರಂದು ಶಿವಮೊಗ್ಗ ಬಂದ್‌ಗೆ ಕರೆ ಕೊಟ್ಟಿವೆ. ರೈತ ಸಂಘ, ನಮ್ಮ ಹೋರಾಟ ಸಮಿತಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತವೆ. ಜೂನ್‌ 27ರಂದು ಎಲ್ಲಾ ಸಂಘಟನೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

ಪರಿಸರ ತಜ್ಞ ಶೇಖರ್ ಗೌಳೇರ್ ಮಾತನಾಡಿ, ಕಾವೇರಿ, ಅರ್ಕಾವತಿ ಸೇರಿದಂತೆ ಹಲವು ನದಿಗಳಿಂದ ಈಗಾಗಲೇ ಬೆಂಗಳೂರಿಗೆ ನೀರು ಹರಿಸಲಾಗುತ್ತಿದೆ. ಈಗ ಸರ್ಕಾರದ ಕಣ್ಣು ಶರಾವತಿಯ ಮೇಲೆ ಬಿದ್ದಿದೆ. ಸಮುದ್ರಕ್ಕೆ ಸೇರುವ ನೀರು ಬಳಸಿಕೊಳ್ಳುತ್ತೇವೆ ಎಂದು ಸುಳ್ಳು ವರದಿ ತಯಾರಿಸಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಮಲೆನಾಡು ನಾಶವಾಗುತ್ತದೆ. ಇದು ಅವೈಜ್ಞಾನಿಕ ನಿರ್ಧಾರ. ಚಳವಳಿಯ ಮೂಲಕವೇ ಇದಕ್ಕೆ ಉತ್ತರ ನೀಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಎಸ್.ಬಿ.ಅಶೋಕ್‌ಕುಮಾರ್, ಗೋ.ರಮೇಶ್‌ ಗೌಡ, ಕಾಂತೇಶ್ ಕದರಮಂಡಲಗಿ, ಪರಿಸರ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.