ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕೃಷಿಭೂಮಿ ಸ್ವಾಧೀನವಿಲ್ಲ; VM ವಿಜಯ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳಬಹುದಾದ ಬೇಗೋಡಿ ಗ್ರಾಮ ಮತ್ತು ಸುತ್ತಲಿನ ಅರಣ್ಯ ಪ್ರದೇಶ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳಬಹುದಾದ ಬೇಗೋಡಿ ಗ್ರಾಮ ಮತ್ತು ಸುತ್ತಲಿನ ಅರಣ್ಯ ಪ್ರದೇಶ   

ಸಾಗರ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಉತ್ಪಾದನೆಗೊಳ್ಳುವ ವಿದ್ಯುತ್ ವಿತರಣೆಗಾಗಿ ಯಾವುದೇ ಹೊಸ ಗ್ರಿಡ್ ಸ್ಥಾಪಿಸುವುದಿಲ್ಲ. ಈಗಿರುವ ವಿದ್ಯುತ್ ಮಾರ್ಗಗಳ ಮೂಲಕವೇ ವಿತರಣೆ ಕಾರ್ಯ ನಡೆಯುವುದರಿಂದ ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ.ವಿಜಯ್ ಸ್ಪಷ್ಟಪಡಿಸಿದರು. 

‘ಒಟ್ಟಾರೆಯಾಗಿ ಯೋಜನೆಯಿಂದ ಲಾಭವೇ ಇಲ್ಲ ಎಂದು ಹೇಳುವುದು ಸರಿಯಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.  

‘ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಮೇಲ್ಭಾಗದಲ್ಲಿ ಒಂದು ಹಾಗೂ ಕೆಳ ಭಾಗದಲ್ಲಿ ಒಂದು ಹೀಗೆ ಎರಡು ಜಲಾಶಯಗಳು ಬೇಕಾಗುತ್ತವೆ. ಈ ಕಾರಣಕ್ಕೆ ತಲಕಳಲೆ-ಗೇರುಸೊಪ್ಪ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗೆ ಎರಡು ಜಲಾಶಯಗಳು ಲಭ್ಯವಿಲ್ಲದ ಸ್ಥಳದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ’ ಎಂದು ಮಾಹಿತಿ ನೀಡಿದರು. 

ADVERTISEMENT

‘ಪಂಪ್ಡ್ ಸ್ಟೋರೇಜ್ ಯೋಜನೆಗೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಯೋಜನೆ ಪರ್ಯಾಯವಾದರೂ, ಅದು ಪಂಪ್ಡ್ ಸ್ಟೋರೇಜ್‌ಗಿಂತ ದುಬಾರಿಯಾದದ್ದು. ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕವನ್ನು ಹಂತ ಹಂತವಾಗಿ ದೇಶಾದ್ಯಂತ ಮುಚ್ಚಲು ತೀರ್ಮಾನಿಸಲಾಗಿದೆ. ಸೌರ, ಗಾಳಿಯ ಶಕ್ತಿ ನೆರವಿನಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್‌ನ ಪ್ರಮಾಣ ಕಡಿಮೆ ಇರುವುದರಿಂದ ಪಂಪ್ಡ್ ಸ್ಟೋರೇಜ್ ಅನಿವಾರ್ಯ’ ಎಂದು ಸಮರ್ಥಿಸಿದರು. 

‘ಯೋಜನೆ ಅನುಷ್ಠಾನದಿಂದ 16 ಸಾವಿರ ಮರಗಳ ಕಡಿತಲೆಯಾಗಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈಗ ಅರಣ್ಯ ಇಲಾಖೆ ಗುರುತಿಸಿರುವ ಪ್ರಕಾರ 12,500 ಮರಗಳು ಮಾತ್ರ ಕಡಿತಲೆಯಾಗುತ್ತವೆ. 21 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಯೋಜನಾ ಪ್ರದೇಶದಲ್ಲಿ ನಿರ್ಮಿಸಲು 1,800 ಟನ್ ಸ್ಫೋಟಕ ಬಳಸಲಾಗುವುದು. ಭೂ ಕುಸಿತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ತಂತ್ರಜ್ಞಾನ ಬಳಸಲಾಗುವುದು’ ಎಂದು ತಿಳಿಸಿದರು.

ಕೆಪಿಸಿಎಲ್‌ನ ಮುಖ್ಯ ಎಂಜಿನಿಯರ್‌ರಾದ ಶಿಲ್ಪಾ ರಾಜ್, ಎಂ.ಮಾದೇಶ್, ಸುರೇಶ್ ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.