ಸಾಗರ: ಶರಾವತಿ ಕಣಿವೆಯಲ್ಲಿ ಪಶ್ಚಿಮಘಟ್ಟದ ಹೃದಯ ಸೀಳಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಯಾವುದೆ ಕಾರಣಕ್ಕೂ ಅನುಷ್ಠಾನಗೊಳಿಸುವುದು ಬೇಡ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರೈತ ಸಂಘ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿಯ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಭಾನುವಾರ ಮಾತನಾಡಿದರು.
‘ಪರಿಸರ ನಾಶ ಮಾಡಿ ಕೈಗೊಳ್ಳುವ ಅಭಿವೃದ್ಧಿ ಸಂಸ್ಕಾರವಿಲ್ಲದ ಶಿಕ್ಷಣ ನೀಡಿದಂತೆ. ಪರಿಸರದ ಉಳಿವು ಮತ್ತು ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗಬೇಕು. ಪಶ್ಚಿಮಘಟ್ಟ ನಾಶವಾದರೆ ಯಾವ ನದಿಯೂ ಉಳಿಯುವುದಿಲ್ಲ. ಭವಿಷ್ಯದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತದೆ. ಸ್ವರ್ಗದಂತಿರುವ ಭೂಮಿಯನ್ನು ನರಕ ಮಾಡಿಕೊಳ್ಳಬೇಕೇ ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.
ವಿದ್ಯುತ್ ಉತ್ಪಾದನೆಗಾಗಿ ಪರಿಸರಕ್ಕೆ ಮಾರಕವಲ್ಲದ ಪರ್ಯಾಯ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಬೇಕು. ಬೆಂಗಳೂರಿನಲ್ಲಿ ನಡೆದ ಪರಿಸರವಾದಿಗಳ, ಕಾನೂನು ತಜ್ಞರ ಸಭೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಂದರ್ಭ ಎದುರಾದರೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಘೋಷಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪರಿಸರಕ್ಕಾಗಿ ನಾವು ಸಂಘಟನೆಯ ಧಾರವಾಡದ ಕವಿತಾ ಎ.ಎಸ್. ಮಾಧುರಿ ಅಶೋಕ್, ವಿಠ್ಠಲ್ ರಾವ್ ಮದನ್‌ಕರ್, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಮಹೇಶ್ ಬಸಾಪುರ, ಪ್ರಮುಖರಾದ ವೀರಪ್ಪ ಅರಕೇರಿ, ಆರ್.ಜಿ.ತಿಮ್ಮಾಪುರ, ಲೋಕೇಶ್ವರಪ್ಪ, ಡಾ.ಬಸವರಾಜ್, ಬಾಪೇಗೌಡ ಕೋಲಾರ, ಕಬಸೆ ಅಶೋಕ್ ಮೂರ್ತಿ, ತೀ.ನ.ಶ್ರೀನಿವಾಸ್, ಹಿತಕರ್ ಜೈನ್, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಕುಮಾರಗೌಡ ಇದ್ದರು.