ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಪಾದಯಾತ್ರೆ 26ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:06 IST
Last Updated 25 ಸೆಪ್ಟೆಂಬರ್ 2021, 5:06 IST
ಮಂಜುನಾಥ್‌ ಗೌಡ
ಮಂಜುನಾಥ್‌ ಗೌಡ   

ರಿಪ್ಪನ್‌ಪೇಟೆ:ಶರಾವತಿ ಮತ್ತು ವರಾಹಿ, ಚಕ್ರ, ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಂದ ಸೆ.26ರಿಂದ 28ರವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್‌ ಮುಖಂಡ ಆರ್‌.ಎಂ. ಮಂಜುನಾಥ್‌ ಗೌಡ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘45 ಕಿ.ಮೀ ವರೆಗೆ ನಡೆಯಲಿರುವ ಪಾದಯಾತ್ರೆಗೆ ಕಲ್ಲುಕೊಪ್ಪ ಗ್ರಾಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಲಿದ್ದಾರೆ. ಆರು ದಶಕದಿಂದ ಆಳಿದ ಸರ್ಕಾರಗಳು ಮುಳುಗಡೆ ಸಂತ್ರಸ್ತರ ಪರವಾಗಿ ಕೇವಲ ಚರ್ಚೆಗೆ ಮಾಡಿದ್ದು ಬಿಟ್ಟರೆ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ದೂರಿದರು.

ಮೈಸೂರು ಸರ್ಕಾರದಲ್ಲಿ ನಿರ್ಮಾಣಗೊಂಡ ರಾಜ್ಯದ ನಿರಾವರಿ ಹಾಗೂ ಜಲ ವಿದ್ಯುತ್‌ ಯೋಜನೆಗಳಿಗಾಗಿ ನೂರಾರು ಏಕ್ರೆ ಜಮೀನು ಕಳೆದುಕೊಂಡು ಅಂದಿನಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ನೆಲೆ ನೀಡುವುದು ಸರ್ಕಾರದ ಮೊದಲ ಕರ್ತವ್ಯ ಎಂದರು.

ADVERTISEMENT

ಕೇಂದ್ರ ಸರ್ಕಾರದ ಕಠಿಣ ಕಾನೂನು ರಾಜ್ಯದ ಅರಣ್ಯ ಭೂಮಿ ಪರಿವರ್ತನೆಗೆ ತೊಡಕಾಗಿದೆ. ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಅಡಳಿತ ಇದ್ದು, ಸಮಸ್ಯೆ ಇರ್ಥ್ಯರ್ತಕ್ಕೆ ಮುಂದಾಗಬೇಕು.ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಮುಳುಗಡೆ ಸಂತ್ರಸ್ತರು ಮೀಸಲು ಅರಣ್ಯದಲ್ಲಿ ನೆಲೆಸಿದ್ದು, ಅವರ ಬದುಕು ಅತಂತ್ರವಾಗಿದೆ. ಕೇಂದ್ರ ಸರ್ಕಾರದ ಕಾನೂನು ತೊಡಕುಗಳನ್ನು ಸರಿಪಡಿಸಿ ಸಂತ್ರಸ್ತರನ್ನು ಗುರುತಿಸಿ ಜಮೀನಿನ ಹಕ್ಕುಪತ್ರ ನೀಡಬೇಕು ಎಂದುಆಗ್ರಹಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಂ. ಪರಮೇಶ, ತೋಟಗಾರಿಕೆ ಪತ್ತಿನ ಸಂಘದ ಅಧ್ಯಕ್ಷ ತೊರೆಗದ್ದೆ ಲೋಕಪ್ಪಗೌಡ, ಅಮೃತ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಂ. ಬಷೀರ್‌ ಸಾಬ್‌, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್‌. ಚಂದ್ರೇಶ್‌, ಆಶೀಫ್‌, ಡಿ.ಇ. ಮಧುಸೂದನ್‌, ಗಣಪತಿ, ಮುಖಂಡ ಅಮೀರ್‌ ಹಂಜಾ, ಮಳವಳ್ಳಿ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.