ADVERTISEMENT

ಹೈಕೋರ್ಟ್ ತಡೆಯಾಜ್ಞೆ ನಂತರವೂ ಕಾಮಗಾರಿ ಸಲ್ಲ: ರೈತ ಮುಖಂಡ ಸಂತೋಷ್

ಈಸೂರು–ಅಂಜನಾಪುರ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ: ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:13 IST
Last Updated 9 ಫೆಬ್ರುವರಿ 2026, 5:13 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಶಿಕಾರಿಪುರ: ‘ಈಸೂರು ಗ್ರಾಮದಿಂದ ಅಂಜನಾಪುರ ಗ್ರಾಮದವರೆಗೆ 110/11 ಕೆ.ವಿ. ವಿದ್ಯುತ್ ಲೈನ್ ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಹೈಕೋಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಗುತ್ತಿಗೆದಾರರು ಕೂಡಲೇ ಕಾಮಗಾರಿ ನಿಲ್ಲಿಸಬೇಕು’ ಎಂದು ರೈತ ಮುಖಂಡ ಸಂತೋಷ್ ಒತ್ತಾಯಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.2ರಂದು ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದರೂ ಅಧಿಕಾರಿಗಳು ಜಾಣಮೌನ ವಹಿಸುತ್ತಿದ್ದಾರೆ. ರೈತರಿಗೆ ಕಿರುಕುಳ ನೀಡುವ ಮನೋಭಾವ ಹೊಂದಿದ್ದಾರೆ. ಅದು ಮುಂದುವರಿದರೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಈ ಹಿಂದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸಿ ಗುತ್ತಿಗೆದಾರರ ಹಿತಕಾಯುವ ಕೆಲಸ ಮಾಡಿದ್ದಾರೆ. ಇದರ ಪರಿಣಾಮ ರೈತರು ತೊಂದರೆಗೆ ಒಳಗಾಗಿದ್ದಾರೆ. ವಿದ್ಯುತ್ ಲೈನ್ ಬದಲಿ ಮಾರ್ಗದಲ್ಲಿ ಹಾಕಿದರೆ ಸರ್ಕಾರಕ್ಕೂ ಹಣದ ಉಳಿತಾಯ ಆಗುತ್ತದೆ. ರೈತರ ಹಿತಕ್ಕಾಗಿ ಮಾರ್ಗ ಬದಲಾಯಿಸಬೇಕು ಎನ್ನುವುದು ರೈತರ ಒತ್ತಾಯ’ ಎಂದರು.

ADVERTISEMENT

‘ವಿದ್ಯುತ್ ಮಾರ್ಗ ಬದಲಾಯಿಸುವಂತೆ ಒತ್ತಾಯಿಸಿ ರೈತರು ಮಂತ್ರಿಗಳು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಬಳಿ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗದ ಕಾರಣಕ್ಕೆ ಅಹೋರಾತ್ರಿ ಧರಣಿ ನಡೆಸಿದರೂ ಪ್ರಯೋಜನವಾಗಲಿಲ್ಲ. ರೈತರ ಮೇಲೆ ದಬ್ಬಾಳಿಕೆ ನೀತಿ ಅನುಸರಿಸಿ ಪೊಲೀಸರನ್ನು ಇಟ್ಟುಕೊಂಡು ಕಾಮಗಾರಿ ನಡೆಸಲು ಆರಂಭಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದು ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ರೈತ ಮುಖಂಡ ಡಿ.ಎಸ್.ಈಶ್ವರಪ್ಪ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಪಾಟೀಲ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ್, ಉಪಾಧ್ಯಕ್ಷ ಅಬ್ದುಲ್ ಮುನಾಫ್, ಸುಭಾಷ್‌ಚಂದ್ರ, ಸಿ.ಬಿ.ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.