ADVERTISEMENT

ಶಿಕಾರಿಪುರ | ಸಮೃದ್ಧ ಹೂವಿನಿಂದ ಕಂಗೊಳಿಸುತ್ತಿರುವ ಮಾವು: ಕೃಷಿಕರಲ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:05 IST
Last Updated 19 ಜನವರಿ 2026, 4:05 IST
ಶಿಕಾರಿಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ಮಾವಿನ ಮರದಲ್ಲಿ ಹೂವುಗಳೊಂದಿಗೆ ಕಂಗೊಳಿಸುತ್ತಿರುವ ಮಾವಿನ ಮರಗಳು
ಶಿಕಾರಿಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ಮಾವಿನ ಮರದಲ್ಲಿ ಹೂವುಗಳೊಂದಿಗೆ ಕಂಗೊಳಿಸುತ್ತಿರುವ ಮಾವಿನ ಮರಗಳು   

ಶಿಕಾರಿಪುರ: ಪ್ರಸಕ್ತ ವರ್ಷದ ಉತ್ತಮ ಮಳೆ, ಚಳಿಯ ಕಾರಣಕ್ಕೆ ‘ಹಣ್ಣುಗಳ ರಾಜ’ ಎಂಬ ಖ್ಯಾತಿ ಪಡೆದಿರುವ ಮಾವಿನ ಮರದ ತುಂಬೆಲ್ಲಾ ಹೂ ಬಿಟ್ಟು ಕಂಗೊಳಿಸುತ್ತಿದ್ದು, ಕೃಷಿಕರ ಮನಸ್ಸಿನಲ್ಲಿ ಭರವಸೆಯ ಆಸೆ ಮೂಡಿಸಿದೆ.

ತಾಲ್ಲೂಕಿನಲ್ಲಿ ಅಂದಾಜು 800 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಉಡುಗಣಿ, ತಾಳಗುಂದ ಹೋಬಳಿಯಲ್ಲಿ ಇದರ ವಿಸ್ತಾರ ಹೆಚ್ಚು. ಜಕ್ಕನಹಳ್ಳಿ, ಜಂಬೂರು, ತರಲಘಟ್ಟ, ಹಾರೇಗೊಪ್ಪ, ಉಡುಗಣಿ, ತಡಸನಹಳ್ಳಿ, ಕೊರಟಿಕೆರೆ ಸೇರಿದಂತೆ ಹಲವು ಗ್ರಾಮದಲ್ಲಿ ಮಾವಿನ ಮರಗಳು ಇದ್ದು, ಎಲ್ಲ ಕಡೆಯೂ ಅವು ಹೂ ಹೊತ್ತು ಸುವಾಸನೆ ಬೀರುತ್ತಾ ಮುದ ನೀಡುತ್ತಿವೆ.

ಭೂಮಿಯಲ್ಲಿನ ತೇವಾಂಶ, ಅಕಾಲಿಕ ಹಿಂಗಾರು ಮಳೆ ಬಾರದಿರುವುದು, ಹೆಚ್ಚಿನ ಚಳಿಯ ವಾತಾವರಣವು ಮಾವಿನ ಮರದಲ್ಲಿ ಹೂವು ಹೆಚ್ಚು ಕಾಣಿಸಲು ಕಾರಣವಾದ ಅಂಶಗಳು. ಮಂಜು ಹೆಚ್ಚಾಗಿ, ಅಕಾಲಿಕ ಮಳೆ ಬಂದರೆ ಹೂವು ಉದುರುವ ಭಯವೂ ರೈತರಲ್ಲಿದ್ದು, ಸದ್ಯಕ್ಕೆ ಉತ್ತಮ ಇಳುವರಿ ನಿರೀಕ್ಷೆ ಮನಸ್ಸಿಗೆ ಖುಷಿ ನೀಡುತ್ತಿದೆ.

ADVERTISEMENT

ಮಾವಿನ ಬೆಳೆಗೆ ಈ ಹಿಂದೆ ಔಷಧಿ, ಗೊಬ್ಬರ ಏನೂ ಬಳಸುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಔಷಧ ಸಿಂಪರಣೆ ಹೆಚ್ಚಿದ್ದರೂ ಗುಣಮಟ್ಟದ ಮಾವು ಮರೀಚಿಕೆ ಆಗುತ್ತಿದೆ ಎಂದು ರೈತ ಜಗದೀಶ್ ಹೇಳುತ್ತಾರೆ.

‘ರಸಪೂರಿ ಬಾದಾಮಿ ಹಣ್ಣಿನ ಗಿಡಗಳು ನಮ್ಮ ತೋಟದಲ್ಲಿವೆ. ಎಲ್ಲವೂ ಹೂ ಬಿಟ್ಟು ನಳನಳಿಸುತ್ತಿರುವುದು ಖುಷಿ ನೀಡಿದೆ. ಕಟಾವು ಸಮಯದಲ್ಲಿನ ಮಾರುಕಟ್ಟೆ ದರ ರೋಗ ಬಾಧೆ ಪೂರ್ವ ಮುಂಗಾರಿನ ಆಲಿಕಲ್ಲು ಮಳೆಯಿಂದಾಗಿ ಇಳುವರಿ ಕುಸಿತದ ಭಯವೂ ಇದೆ 
ಮುಜ್ಜುಖಾನ್ ಮಾವು ಬೆಳೆಗಾರ ಜಕ್ಕನಹಳ್ಳಿ
ಕಾಯಿ ಕಟ್ಟುವ ಸಮದಯಲ್ಲಿ ಜಿಗಿಹುಳು ಕಾಯಿಕೊರಕ ರೋಗ ಕಾಣಿಸಬಹುದು. ರೈತರು ಕಾಲಕಾಲಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಔಷಧ ಸಿಂಪರಣೆ ಮಾಡಿ ಉತ್ತಮ ಇಳುವರಿ ಪಡೆಯಬಹುದು
ಆರ್.ಡಿ.ಕುಮಾರ್ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.