
ಶಿಕಾರಿಪುರದ ಸಂತೆ ಮಾರುಕಟ್ಟೆಗೆ ಚಾವಣಿ ಹಾಕುವ ಕಾಮಗಾರಿ ಭರದಿಂದ ಸಾಗಿರುವುದು
ಶಿಕಾರಿಪುರ: ಪಟ್ಟಣದಲ್ಲಿ ಪ್ರತಿ ಶನಿವಾರ ನಡೆಯುವ ಸಂತೆಯು ಜಿಲ್ಲೆಯಲ್ಲೇ ಹೆಚ್ಚು ಜನದಟ್ಟಣೆಯದ್ದು ಎಂದು ಪ್ರಸಿದ್ಧಿಯಾಗಿದೆ. ಇಷ್ಟು ದಿನ ಬಯಲಲ್ಲೇ ನಡೆಯುತ್ತಿದ್ದ ಕಾರಣ ಮಳೆ ಬಂದರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ವ್ಯಾಪಾರಸ್ಥರು ಪರದಾಡಬೇಕಿತ್ತು. ಗ್ರಾಹಕರು ಯಾವುದಾದರೂ ಗುಡಾರದ ಆಶ್ರಯ ಪಡೆಯುವ ಅನಿವಾ ರ್ಯತೆ ಇತ್ತು. ಈಗ ಇಡೀ ಸಂತೆ ಮೈದಾನಕ್ಕೆ ಚಾವಣಿ ಹಾಕುವ ಕಾಮಗಾರಿ ಆರಂಭಗೊಂಡಿದ್ದು, ವ್ಯಾಪಾರಿಗಳು ಹಾಗೂ ಗ್ರಾಹಕರ ಖುಷಿಗೆ ಕಾರಣವಾಗಿದೆ.
ವ್ಯಾಪಾರಸ್ಥರು, ಗ್ರಾಹಕರು ಬಿಸಿಲು, ಮಳೆಯ ಚಿಂತೆ ಇಲ್ಲದೆ ಸಂತೆ ಮಾಡಬೇಕು ಎಂಬ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಸಂತೆ ಮೈದಾನಕ್ಕೆ ಚಾವಣಿ ಹಾಕಿಸಲು ತೀರ್ಮಾನಿಸಲಾಗಿತ್ತು. ಈ ಕುರಿತ ಪ್ರಸ್ತಾವವನ್ನೂ ಸಿದ್ಧಪಡಿಸಲಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ ಅವರ ಪರಿಶ್ರಮದ ಪರಿಣಾಮ ಕಾಮಗಾರಿಗೆ ನಬಾರ್ಡ್ ₹9 ಕೋಟಿ ಅನುದಾನ ನೀಡಿದೆ. ಎರಡು ವರ್ಷದ ಹಿಂದೆ ಕಾಮಗಾರಿಗೆ ಚಾಲನೆ ದೊರೆತಿತ್ತು. ಆದರೆ ಜಾಗದ ವಿವಾದದ ಕಾರಣಕ್ಕೆ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಭರದಿಂದ ಸಾಗಿದೆ.
29 ಮೀಟರ್ ಅಗಲ, 370 ಮೀಟರ್ ಉದ್ದದ ಬೃಹತ್ ಚಾವಣಿ ಅಳವಡಿಸುವ ಕೆಲಸ ಭರದಿಂದ ಸಾಗಿದ್ದು, ಈಗಾಗಲೇ ಎರಡೂ ಬದಿಯಲ್ಲಿ ಕಬ್ಬಿಣದ ಪಿಲ್ಲರ್ ಹಾಕಲಾಗಿದೆ. ಬೀಮ್ ಮತ್ತು ಪರ್ಲಿನ್ ಹಾಕುವ ಕೆಲಸ ನಡೆಯುತ್ತಿದೆ. ಕಾಮಗಾರಿಯನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸಾಮಾನ್ಯ ತಗಡು ಬಳಸದೆ ಗ್ಯಾಲಿಯಲಂ ಶೀಟ್ ಹಾಕುವುದಕ್ಕೆ ಅವಕಾಶ ಕಲ್ಪಿಸಿರುವ ಕಾರಣಕ್ಕೆ ಚಾವಣಿ ಹೆಚ್ಚು ಬಾಳಿಕೆ ಬರುತ್ತದೆ ಎಂದು ಗುತ್ತಿಗೆದಾರರು ಹೇಳುತ್ತಾರೆ.
ಬಿಸಿಲು, ಮಳೆಗಾಲದಲ್ಲಿ ಸಂತೆ ಮಾಡುವುದು ಹೇಗಪ್ಪಾ ಎನ್ನುವ ತಾಲ್ಲೂಕಿನ ರೈತರಿಗೆ, ಮಹಿಳೆಯರಿಗೆ, ಜನರಿಗೆ, ಬೇರೆ ಬೇರೆಡೆಯಿಂದ ಆಗಮಿಸುವ ವ್ಯಾಪಾರಸ್ಥರಿಗೆ ಸಂತೆ ಮಾರುಕಟ್ಟೆಗೆ ಚಾವಣಿ ಅಳವಡಿಕೆ ಕಾಮಗಾರಿ ಖುಷಿ ನೀಡಿದೆ.
ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ರೈತರು, ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿರುವ ತೃಪ್ತಿ ಇದ್ದು, ಇನ್ನಷ್ಟು ಕೆಲಸ ಮಾಡುವುದಕ್ಕೆ ಜನರು ಶಕ್ತಿ ನೀಡಬೇಕುಬಿ.ವೈ.ರಾಘವೇಂದ್ರ, ಸಂಸದ
ಸಂತೆ ಮಾರುಕಟ್ಟೆ ಚಾವಣಿ ನಿರ್ಮಾಣ ಕಾಮಗಾರಿ ಈಗಾಗಲೇ ಶೇ 50ರಷ್ಟು ಮುಗಿದಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆಗದಿಗೆಯ್ಯ, ಕಾರ್ಯದರ್ಶಿ, ಎಪಿಎಂಸಿ ಶಿಕಾರಿಪುರ
ದೊಡ್ಡ ಮೈದಾನಕ್ಕೆ ಚಾವಣಿ ಹಾಕಿಸುವ ಕಲ್ಪನೆ, ಹಾಕಬೇಕು ಎನ್ನುವ ಒತ್ತಡ ಯಾರಿಂದ ಬಾರದಿದ್ದರೂ ಸಂಸದ ಬಿ.ವೈ.ರಾಘವೇಂದ್ರ ದೂರದೃಷ್ಟಿಯ ಫಲವಾಗಿ ನಿರ್ಮಾಣ ಆಗುತ್ತಿರುವುದು ಶ್ಲಾಘನೀಯಸುಧೀರ್ ಎಪಿಎಂಸಿ ಮಾಜಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.