ADVERTISEMENT

ಅಮಟೆಕೊಪ್ಪ: ₹1.13 ಕೋಟಿ ಸರ್ಕಾರಕ್ಕೆ ಪಾವತಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 3:17 IST
Last Updated 7 ಫೆಬ್ರುವರಿ 2026, 3:17 IST
ಅಡಿಕೆ ತೋಟ (ಮಾದರಿ ಚಿತ್ರ)
ಅಡಿಕೆ ತೋಟ (ಮಾದರಿ ಚಿತ್ರ)   

ಶಿಕಾರಿಪುರ: ತಾಲ್ಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆಯ ಮಾರ್ಗಸೂಚಿ ಉಲ್ಲಂಘಿಸಿ 195 ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿರುವ ಕಾರಣಕ್ಕೆ ಕಾಮಗಾರಿ ಸಮಯದಲ್ಲಿದ್ದ ಪ್ರಭಾರ ಪಿಡಿಒ ಆಗಿದ್ದ ಗ್ರೇಡ್–1 ಕಾರ್ಯದರ್ಶಿ ಹಾಗೂ ನಾಲ್ವರು ಅಧ್ಯಕ್ಷರು ಸೇರಿಕೊಂಡು ಒಟ್ಟು ₹ 1.13 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

ಮನರೇಗಾ ಯೋಜನೆ ಅಡಿ 2022ರಿಂದ 2025ರವರೆಗೆ ಮೂರು ವರ್ಷಗಳಲ್ಲಿ ಅಮಟೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 417 ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಅದರಲ್ಲಿ 195 ಕಾಮಗಾರಿಗಳಿಗೆ ಮನರೇಗಾ ಯೋಜನೆ ಮಾರ್ಗಸೂಚಿ ಪ್ರಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯದೆ ಕೆಲಸ ಮಾಡಲಾಗಿದೆ ಎಂದು ಆ ಸಮಯದಲ್ಲಿದ್ದ ಪಿಡಿಒ ಶಿವಪ್ಪ ಎಚ್‌ ಮತ್ತು ನಾಲ್ವರು ಅಧ್ಯಕ್ಷೆಯರಾದ ಮಂಜಮ್ಮ ಶಿವಪ್ಪ, ಮಂಜುಳಾ ಸಿದ್ದಪ್ಪ, ಶಿಲ್ಪಾ ಸಿ ಚಂದ್ರಶೇಖರ್‌ ಹಾಗೂ ಸುಧಾ ಸಿ.ಆರ್‌. ಪ್ರಭು ಅವರ ವಿರುದ್ಧ ಆರೋಪ ಕೇಳಿಬಂದಿದ್ದು, ನಾಲ್ವರು ಅಧ್ಯಕ್ಷರು ₹ 56.08 ಲಕ್ಷ ಹಾಗೂ ಗ್ರೇಡ್– 1 ಕಾರ್ಯದರ್ಶಿ ₹ 56.08 ಲಕ್ಷ ಹಾಗೂ ಬೌತಿಕವಾಗಿ ಕಾಮಗಾರಿ ಅನುಷ್ಠಾನ ಮಾಡದಿರುವ ಆರೋಪದ ಮೇಲೆ ಹೆಚ್ಚುವರಿಯಾಗಿ ₹ 84, 688 ಪಾವತಿಸುವಂತೆ ಆದೇಶ ನೀಡಲಾಗಿದೆ.

ನರೇಗಾ ಯೋಜನೆಗಳಿಗೆ ಕ್ರಿಯಾ ಯೋಜನೆ ಅನುಮೋದನೆ ಪಡೆಯದೆ ಇದ್ದರೆ ಆ ಅವಧಿಯ ಅಧ್ಯಕ್ಷರು, ಪಿಡಿಒ ತಲಾ ಶೇ 50ರಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎನ್ನುವ ನಿಯಮ ಇದೆ. ಅದರ ಪ್ರಕಾರ ವಸೂಲಾತಿಗೆ ಆದೇಶ ನೀಡಲಾಗಿದೆ. ಅನುಮತಿ ಪಡೆಯದ ಮನರೇಗಾದ 195 ಕಾಮಗಾರಿಯಲ್ಲಿ 180ಕ್ಕೂ ಹೆಚ್ಚು ಅಡಿಕೆ ತೋಟ ಅಭಿವೃದ್ಧಿಗೇ ನೀಡಲಾಗಿದ್ದು, ಇನ್ನುಳಿದವು ಕೊಟ್ಟಿಗೆ ನಿರ್ಮಾಣ ಸೇರಿ ಇತರೆ ಕಾಮಗಾರಿಗಳದ್ದಾಗಿದೆ.

ADVERTISEMENT

‘ಜನರಿಂದ ಹಣ ಪಡೆದು ಹಳೆಯ ತೋಟಗಳಿಗೂ ಅನುದಾನ ನೀಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಗ್ರೇಡ್– 1 ಕಾರ್ಯದರ್ಶಿ ಈ ಹಿಂದೆ ಲೋಕಾಯುಕ್ತ ಪ್ರಕರಣದಲ್ಲಿ ಅಮಾನತುಗೊಂಡಿದ್ದರು. ಪುನಃ ಇದೇ ತಾಲ್ಲೂಕಿನಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅನಕ್ಷರಸ್ಥ ಅಧ್ಯಕ್ಷರಿಗೆ ಮಾಹಿತಿ ನೀಡದೆ ಪ್ರಕರಣ ನಡೆದಿರಬಹುದು’ ಎನ್ನುವುದು ಗ್ರಾಮದ ಹಲವರ ಆರೋಪವಾಗಿದೆ.

ಪ್ರಾಥಮಿಕ ಶಿಕ್ಷಣವನ್ನೂ ಪಡೆಯದ ಗ್ರಾಮ ಪಂಚಾಯಿತಿಯ ಮೂವರು ಅಧ್ಯಕ್ಷರು ಅಧಿಕಾರದಲ್ಲಿರುವಾಗ ಪ್ರಕರಣ ನಡೆದಿದ್ದು ಅವರೆಲ್ಲರಿಗೂ ಸರಿಯಾದ ಮಾಹಿತಿ ಇದೆಯೋ ಇಲ್ಲವೋ ಎನ್ನುವುದು ಸೇರಿ ಕಾಮಗಾರಿ ಆಗಿರುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಉಮೇಶ್ ಮಾರವಳ್ಳಿ ಗ್ರಾಮಸ್ಥ ಅಡಿಕೆ ತೋಟ ನಿರ್ಮಾಣಕ್ಕೆ ಮನರೇಗಾ ಅನುದಾನ ನೀಡಿದೆ. ಅದರಲ್ಲಿ ಹಣ ನೇರವಾಗಿ ರೈತರ ಖಾತೆಗೆ ಕೆಲಸಗಾರರ ಖಾತೆಗೆ ಹೋಗುತ್ತದೆ. ಎಲ್ಲ ಕಾಮಗಾರಿ ಆಗಿದ್ದು ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಜನಪ್ರತಿನಿಧಿಗಳನ್ನು ಹೊಣೆಯಾಗಿಸುವುದು ಸರಿಯಲ್ಲ ಮಮತಾ ಕುಮಾರ್ ಗ್ರಾ.ಪಂ. ಅಧ್ಯಕ್ಷೆ ಅಮಟೆಕೊಪ್ಪ  ಮನರೇಗಾ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎನ್ನುವ ಕುರಿತು ತನಿಖೆಗೆ ಆದೇಶಿಸಲಾಗಿದೆ. ಕಾಮಗಾರಿಗೆ ಘಟನೋತ್ತರ ಅನುಮತಿ ನೀಡಬೇಕು ಎಂದು ಗ್ರಾ.ಪಂ. ನಡವಳಿ ಮಾಡಿದೆ ಎನ್ನಲಾಗಿದ್ದು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎನ್.ಹೇಮಂತ್ ಸಿಇಒ ಜಿ.ಪಂ. ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.