ಶಿಕಾರಿಪುರ: ತಾಲ್ಲೂಕಿನ ಕುಟ್ರಳ್ಳಿ ಸಮೀಪದ ರಾಜ್ಯ ಹೆದ್ದಾರಿಯ ಟೋಲ್ ಸಂಗ್ರಹ ಕೇಂದ್ರದ ಬಳಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವಿನ ಸಂಘರ್ಷ ಮುಂದುವರಿದಿದೆ.
ಹಣ ನೀಡುವುದಿಲ್ಲ ಎಂದು ವಾಹನ ಸವಾರರು ಟೋಲ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸುತ್ತಿರುವುದು ಕಳೆದ ಎರಡು ದಿನಗಳಿಂದ ಕಂಡುಬರುತ್ತಿದೆ. ಶುಕ್ರವಾರ ನೂರಕ್ಕೂ ಹೆಚ್ಚು ವಾಹನಗಳು ಟೋಲ್ ಸಂಗ್ರಹ ಕೇಂದ್ರ ಎದುರು ಜಮಾವಣೆಗೊಂಡಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶನಿವಾರವೂ ಕೆಲ ವಾಹನ ಚಾಲಕರು ತಕರಾರು ತೆಗೆದಿದ್ದರು. ಆಗ ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ಬಿಡಿಸಿದ್ದರು.
ಟೋಲ್ ತೆರವು ಮಾಡುವಂತೆ ಒತ್ತಾಯಿಸಿ ಈಚೆಗೆ ಶಿಕಾರಿಪುರ ಬಂದ್ ಮಾಡಲಾಗಿತ್ತು. ಆದರೂ ಟೋಲ್ ಸಂಗ್ರಹ ಮುಂದುವರಿದಿದ್ದು, ತಾಲ್ಲೂಕಿನ ಜನರ ಅಭಿಪ್ರಾಯಕ್ಕೆ ಬೆಲೆ ಇಲ್ಲವಾಗಿದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಟೋಲ್ ಸಂಗ್ರಹ ನಿಲ್ಲಿಸುವುದಕ್ಕೆ ಯಾವುದೇ ಅಧಿಕೃತ ಆದೇಶ ಸರ್ಕಾರದಿಂದ ಬಂದಿಲ್ಲ. ಹೀಗಾಗಿ ಶುಲ್ಕ ಸಂಗ್ರಹ ಮುಂದುವರಿದಿದೆ ಎಂದು ಟೋಲ್ ಸಿಬ್ಬಂದಿ ದಿನವೂ ಜನರ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.