ADVERTISEMENT

ಶಿವಮೊಗ್ಗ | ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆ ವಿವರ: ಚಾಲಕ ಬಂಧನ

51 ಸೈಬರ್‌ ವಂಚನೆ ಪ್ರಕರಣ ದಾಖಲು; ₹ 55 ಕೋಟಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:09 IST
Last Updated 9 ಫೆಬ್ರುವರಿ 2026, 5:09 IST
ಶರತ್ ಕುಮಾರ್
ಶರತ್ ಕುಮಾರ್   

ಶಿವಮೊಗ್ಗ: ಕಮಿಷನ್‌ ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್‌ ಖಾತೆಯ ವಿವರ ಪಡೆದು ಅದನ್ನು ಸೈಬರ್‌ ವಂಚಕರಿಗೆ ಕೊಡುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗದ ತುಂಗಾ ನಗರ ನಿವಾಸಿ, ಕಾರು ಚಾಲಕ ಕೆ.ಶರತ್‌ ಕುಮಾರ್‌ ಅಲಿಯಾಸ್ ಗುಂಡಾ ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಟೀ ಅಂಗಡಿ ನಡೆಸುತ್ತಿದ್ದ ಆತನ ಸ್ನೇಹಿತ ಅಮಿತ್‌ ಎಂಬುವವರ ಬ್ಯಾಂಕ್‌ ಖಾತೆಯ ವಿವರ ಪಡೆದಿದ್ದ ಶರತ್‌ಕುಮಾರ್, ಅವರಿಂದ ಪಾಸ್‌ ಬುಕ್‌, ಎಟಿಎಂ ಕಾರ್ಡ್‌ ಮೊಬೈಲ್‌ ನಂಬರ್‌ಗಳನ್ನು ಕೂಡ ಪಡೆದುಕೊಂಡಿದ್ದ. ಆ ಖಾತೆಗೆ ಹಣದ ವಹಿವಾಟು ಆಧರಿಸಿ 15 ದಿನಕ್ಕೊಮ್ಮೆ ಕಮಿಷನ್‌ ಕೊಡುವುದಾಗಿ ನಂಬಿಸಿದ್ದ. ಕಮಿಷನ್‌ ಆಸೆಗೆ ಅಮಿತ್‌ ಎಲ್ಲ ವಿವರ ಒದಗಿಸಿದ್ದರು.

ಸ್ವಲ್ಪ ಸಮಯದ ಬಳಿಕ ಶರತ್‌ ಕುಮಾರ್‌, ಸ್ನೇಹಿತ ಅಮಿತ್‌ನ ಬ್ಯಾಂಕ್‌ ಖಾತೆ ಫ್ರೀಜ್‌ ಆಗಿದೆ ಎಂದು ತಿಳಿಸಿದ್ದ. ಅನುಮಾನಗೊಂಡ ಅಮಿತ್‌ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ ಹೋಗಿ ತಮ್ಮ ಖಾತೆಯ ಬಗ್ಗೆ ವಿಚಾರಿಸಿದ್ದರು. ಈ ಬ್ಯಾಂಕ್‌ ಖಾತೆಯ ವಿರುದ್ಧ ದೇಶದ ವಿವಿಧೆಡೆ 51 ಸೈಬರ್‌ ಅಪರಾಧ ಪ್ರಕರಣ ದಾಖಲಾಗಿವೆ ಎಂದು ಬ್ಯಾಂಕ್‌ ಸಿಬ್ಬಂದಿ ಮಾಹಿತಿ ನೀಡಿದ್ದರು. ಆತಂಕಗೊಂಡ ಅಮಿತ್‌ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

₹55 ಕೋಟಿ ವಂಚನೆ ಆರೋಪ: ಶಿವಮೊಗ್ಗದ ಸಿ.ಇ.ಎನ್‌ ಠಾಣೆ ಡಿವೈಎಸ್‌ಪಿ ಕೃಷ್ಣಮೂರ್ತಿ, ಇನ್ಸ್‌ಪೆಕ್ಟರ್‌ ಮಂಜುನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶರತ್‌ ಕುಮಾರ್‌ನನ್ನು ಬಂಧಿಸಲಾಗಿದೆ.  ಆತನಿಂದ ವಿವಿಧ ಬ್ಯಾಂಕ್‌ ಖಾತೆಗಳ 18 ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್‌, 7 ಚೆಕ್‌ ಬುಕ್‌ಗಳು, 2 ಮೊಬೈಲ್‌ ಫೋನ್‌ಗಳು, 2 ಕ್ಯೂ.ಆರ್‌ ಕೋಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಬಳಿ ಇದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶದಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ.

ಈ ಖಾತೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸುಮಾರು ₹55,43,56,248 ಮೊತ್ತದ ವಂಚನೆ ಮಾಡಲಾಗಿದೆ. ಅಲ್ಲದೆ ಈ 19 ಖಾತೆಗಳಿಂದ ₹11,48,42,898 ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. 

₹ 1 ಲಕ್ಷಕ್ಕೆ ₹ 3 ರಿಂದ 5 ಸಾವಿರ ಕಮಿಷನ್..

ಖಾತೆದಾರರು ಮಾರಾಟ ಮಾಡಿದ ಖಾತೆಗೆ ಪ್ರತಿ ₹ 1 ಲಕ್ಷ ವರ್ಗಾವಣೆಯಾದಾಗ ಅವರಿಗೆ ₹ 3 ರಿಂದ ₹ 5 ಸಾವಿರ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು. ಕೆಲವರು ಇದನ್ನೇ ಒಂದು ಲಾಭದಾಯಕ ವೃತ್ತಿಯನ್ನಾಗಿಸಿಕೊಂಡಿದ್ದರು. ವ್ಯವಸ್ಥಿತವಾಗಿ ಸೈಬರ್‌ ವಂಚನೆಯ ದಂಧೆಗೆ ಸಹಕರಿಸುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.