ADVERTISEMENT

ಶಿವಮೊಗ್ಗ| ಜಿಲ್ಲೆಯಲ್ಲಿ ಇತಿಹಾಸ ವಿವಿ ಸ್ಥಾಪಿಸಲಿ: ಲಕ್ಷ್ಮೀಶ ಹೆಗಡೆ ಸೋಂದಾ ಮನವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:54 IST
Last Updated 29 ಸೆಪ್ಟೆಂಬರ್ 2025, 4:54 IST
ಶಿವಮೊಗ್ಗ ಅಂಬೇಡ್ಕ‌ರ್ ಭವನದಲ್ಲಿ ಆಯೋಜಿಸಿದ್ದ ಜ್ಞಾನ ದಸರಾ ಕಾರ್ಯಕ್ರಮವನ್ನು ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು
ಶಿವಮೊಗ್ಗ ಅಂಬೇಡ್ಕ‌ರ್ ಭವನದಲ್ಲಿ ಆಯೋಜಿಸಿದ್ದ ಜ್ಞಾನ ದಸರಾ ಕಾರ್ಯಕ್ರಮವನ್ನು ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು   

ಶಿವಮೊಗ್ಗ: ‘ಜಿಲ್ಲೆಯ ತಾಳಗುಂದ ಅಥವಾ ಬನವಾಸಿಯಲ್ಲಿ ಇತಿಹಾಸ ಕುರಿತ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಇದರಿಂದ ಉನ್ನತ ಶಿಕ್ಷಣ ಮತ್ತು ಪ್ರಾಚೀನ ಇತಿಹಾಸ ಸಂಶೋಧನೆಗೆ ಅನುಕೂಲವಾಗಲಿದೆ’ ಎಂದು ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ಅಭಿಪ್ರಾಯಪಟ್ಟರು. 

ಮಹಾನಗರ ಪಾಲಿಕೆ ವತಿಯಿಂದ ಗಾಯತ್ರಿ ಪ್ರತಿಷ್ಠಾನದ ಸಹಯೋಗದಲ್ಲಿ ಇಲ್ಲಿನ ಅಂಬೇಡ್ಕ‌ರ್ ಭವನದಲ್ಲಿ ಜ್ಞಾನ ದಸರಾ ಅಂಗವಾಗಿ ಆಯೋಜಿಸಿದ್ದ ‘ಕದಂಬ ಸಾಮ್ರಾಜ್ಯ ಸಂಸ್ಥಾಪಕ ತಾಳಗುಂದದ ಮಯೂರ ಶರ್ಮ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

‘ವಿಶ್ವವಿದ್ಯಾಲಯ ಸ್ಥಾಪನೆಯಿಂದ ಇತಿಹಾಸದ ಬಗ್ಗೆ ಇನ್ನಷ್ಟು ಉತ್ಖನನ ನಡೆಸಬಹುದು. ಇದರಿಂದ ಹೆಚ್ಚಿನ ಸಂಗತಿಗಳು ಹೊರಬರಲಿವೆ. ಇತಿಹಾಸಕಾರರಲ್ಲಿ ಚಿಕಿತ್ಸಕ ಮನಸ್ಥಿತಿ ಇರಬೇಕು. ಇಲ್ಲಿ ತಾಳಗುಂದದ ಅಭಿವೃದ್ಧಿ ಆಗಬೇಕು. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು. 

ADVERTISEMENT

‘ಇತಿಹಾಸದಲ್ಲಿ ತರ್ಕ, ಜಿಜ್ಞಾಸೆಗಳಿಗೆ ಜಾಗವಿಲ್ಲ. ರಾಜಕೀಯ ಮತ್ತು ಜಾತಿಗಳ ಆಧಾರದ ಮೇಲೆ ಇತಿಹಾಸವನ್ನು ಕಾಣುತ್ತಿದ್ದು, ಕಲಾವಿದರು, ರಾಜರಿಗೆ ಯಾವುದೇ ಜಾತಿ ಇರುವುದಿಲ್ಲ. ಇಲ್ಲಿ ಜಾತಿಯ ಸ್ವಾರ್ಥ ಮನೋಧರ್ಮದಿಂದ ಹೊರಗೆ ಬರಬೇಕು. ಸಮಕಾಲೀನ ಆಕಾರಗಳ ಆಧಾರದ ಮೇಲೆ ಇತಿಹಾಸ ಇರುತ್ತದೆ. ಆಧಾರಗಳೇ ಇತಿಹಾಸದ ಮೂಲ’ ಎಂದರು. 

‘ಇತಿಹಾಸ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಬ್ರಿಟಿಷರ ದೃಷ್ಟಿಕೋನದಿಂದ ಇತಿಹಾಸವನ್ನು ನೋಡುತ್ತಿದ್ದೇವೆ, ಇದು ಬದಲಾಗಬೇಕು’ ಎಂದು ವಿಕಾಸ ವಿದ್ಯಾ ಸಮಿತಿ ಕಾರ್ಯದರ್ಶಿ ಎ.ಜೆ. ರಾಮಚಂದ್ರ ಹೇಳಿದರು. 

‘ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಇತಿಹಾಸದೆಡೆಗೆ ಜನರ ಆಸಕ್ತಿ ಕ್ಷೀಣಿಸಿದೆ. ಭೌಗೋಳಿಕ ಇತಿಹಾಸವನ್ನು ಮರೆತ ಕಾರಣಕ್ಕೆ ಅಫ್ಘಾನಿಸ್ತಾನ, ಪಾಕಿಸ್ತಾನವನ್ನು ಕಳೆದುಕೊಂಡಿದ್ದೇವೆ. ಶಾಸನ ಲಿಪಿಯ ರಚನೆಯಲ್ಲೂ ತಾಳಗುಂದದ ಶಿಕ್ಷಣ ವ್ಯವಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಉತ್ತಮವಾಗಿತ್ತು ಎಂದು ಹೇಳಬಹುದು. ಈ ಕುರಿತ ಬೆಳಕು ಚೆಲ್ಲಬೇಕು’ ಎಂದು ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದರು. 

ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಕೆ.ಎಸ್‌. ನಾರಾಯಣ್‌ ರಾವ್‌, ಸುರೇಖಾ ಮುರುಳಿಧರ್‌, ಪಾಲಿಕೆಯ ವಸಂತಾ ಕುಮಾರಿ ಇದ್ದರು.

ಕದಂಬರ ಕಾಲದ ಅಧ್ಯಾತ್ಮವೂ ಇತಿಹಾಸವಾಗಿದೆ. ತಾಳಗುಂದ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಕರ್ನಾಟಕದಲ್ಲಿ ಕ್ರಾಂತಿ ಮಾಡಿದ ಸ್ಥಳ
ಲಕ್ಷ್ಮೀಶ ಹೆಗಡೆ ಸೋಂದಾ ಇತಿಹಾಸ ಸಂಶೋಧಕ
ದೇವಸ್ಥಾನಕ್ಕೆ ಪ್ರಾಚೀನ ಇತಿಹಾಸ’
‘ತಾಳಗುಂದದ ಪ್ರಣವೇಶ್ವರ ದೇವಾಲಯದ ಸ್ತಂಭ ಶಾಸನವೇ ನಾಡಿಗೆ ಮೊದಲು ತಾಳಗುಂದ ಗ್ರಾಮವನ್ನು ಪರಿಚಯಿಸಿದ್ದು. ಇಲ್ಲಿನ ದೇವಸ್ಥಾನ ಹಲ್ಮಿಡಿ ಶಾಸನಕ್ಕಿಂತಲೂ ಹಳೆಯದು. ಇದನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇಲ್ಲಿನ ಪ್ರಾಚೀನ ಇತಿಹಾಸವನ್ನು ಸಮಾಜಕ್ಕೆ ತಿಳಿಸಬೇಕು. ತಾಳಗುಂದದಲ್ಲಿ ಉತ್ಖನನ ನಡೆದರೆ ಮಯೂರ ಶರ್ಮನ ಬಗ್ಗೆ ಹೆಚ್ಚು ಪುರಾವೆ ಸಿಗಲಿವೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.