ADVERTISEMENT

ವಚನಗಳು ಸಾಹಿತ್ಯವನ್ನು ಮೀರಿದ ಅನುಭಾವ: ಸಂಸದ ಬಿ.ವೈ.ರಾಘವೇಂದ್ರ

-

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:06 IST
Last Updated 19 ಜನವರಿ 2026, 4:06 IST
ಶಿವಮೊಗ್ಗದ ಬಸವ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು
ಶಿವಮೊಗ್ಗದ ಬಸವ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು   

ಶಿವಮೊಗ್ಗ: ವಚನ ಕೇವಲ ಸಾಹಿತ್ಯವಲ್ಲ, ಸಾಹಿತ್ಯವನ್ನು ಮೀರಿದ ಅನುಭಾವ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪಾಲಿಕೆ ಘಟಕ ಹಾಗೂ ಮಾಧ್ಯಮ ಘಟಕದ ಆಶ್ರಯದಲ್ಲಿ ಭಾನುವಾರ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆ ವಚನ ಗ್ರಂಥಿಕೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ವಚನಗಳು ನಮ್ಮನ್ನು ಜೀವನದುದ್ದಕ್ಕೂ ಕೈ ಹಿಡಿದು ನಡೆಸುವ ಶಕ್ತಿ ಹೊಂದಿವೆ. ವಚನಗಳು ಸರ್ವ ಕಾಲಕ್ಕೂ ಅಗತ್ಯವಾದವು, ಜೀವನಕ್ಕೆ ಸ್ಫೂರ್ತಿ. ಅವುಗಳಿಗೆ ಎಂದಿಗೂ ನಾಶವಿಲ್ಲ’ ಎಂದರು.

ADVERTISEMENT

‘ಶಿವಶರಣರ ವಚನಗಳನ್ನು ಯುವ ಪೀಳಿಗೆಗೆ ಕಲಿಸಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅಲ್ಲದೆ ವಿಭೂತಿ ಧರಿಸುವುದು ಸೇರಿದಂತೆ ನಮ್ಮ ಸಂಪ್ರದಾಯವನ್ನು ಮೈಗೂಡಿಸಿಕೊಳ್ಳುವಂತೆ ಮಕ್ಕಳಿಗೆ ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಶೀಘ್ರದಲ್ಲೇ ವಿದ್ಯಾನಗರದಲ್ಲಿ ಎಫ್. ಎಂ. ರೇಡಿಯೋ ಕಾರ್ಯಾರಂಭ ಮಾಡಲಿದ್ದು, ಇದರಲ್ಲಿ ಪ್ರತಿದಿನ ವಚನ ಗಾಯನ, ಶರಣರ ತತ್ವಗಳು ಹಾಗೂ ಧಾರ್ಮಿಕ ಚಿಂತನೆಗೆ ಅವಕಾಶ ನೀಡುವ ಮೂಲಕ ಯುವ ಪೀಳಿಗೆಯು ಜೀವನದ ಪ್ರತಿ ಹಂತವನ್ನು ಕೀಳರಿಮೆಯಿಲ್ಲದೇ ಆತ್ಮ ವಿಶ್ವಾಸದಿಂದ ಎದುರಿಸಲು ಪೂರಕ ವಾತವರಣ ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ಮಹಾಸಭಾ ಪಾಲಿಕೆ ಘಟಕ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೀಶ್, ಗಾಯಕ ಹುಮಾಯೂನ್‌ ಹರ್ಲಾಪುರ್, ಮಹಾಸಭಾ ಪಾಲಿಕೆ ಘಟಕ ಉಪಾಧ್ಯಕ್ಷ ಅರುಣ್ ವಿ.ಟಿ, ಪ್ರಧಾನ ಕಾರ್ಯದರ್ಶಿ ಕತ್ತಿಗೆ ಉಮೇಶ್, ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್. ಸೋಮನಾಥ್ ಉಪಸ್ಥಿತರಿದ್ದರು.

ಉಮಾ ಪಾಟೀಲ್ ಸ್ವಾಗತಿಸಿದರು, ವೇದಾವತಿ ವಂದಿಸಿದರು, ಚೈತ್ರ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು. 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು‌.

ವಚನ ಸಹಿತ್ಯ ಅತ್ಯಂತ ಶ್ರೀಮಂತವಾದುದು ಯುವ ಪೀಳಿಗೆ ಇದನ್ನು ಅರ್ಥ ಮಾಡಿಕೊಂಡರೆ ಸಂಸಾರ ಹಾಗೂ ಸಮಾಜದಲ್ಲಿ ಶಾಂತಿ ಇರಲಿದೆ
ಎಸ್. ರುದ್ರೇಗೌಡ ವಿಧಾನ ಪರಿಷತ್ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.