ADVERTISEMENT

ಬಾವಿ ನೀರಿನಲ್ಲಿ ಮುಸ್ಲಿಮರು ಕಾಲು ತೊಳೆಯುವುದನ್ನು ಸಹಿಸಲ್ಲ: ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:30 IST
Last Updated 18 ಮೇ 2022, 4:30 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಶಿವಮೊಗ್ಗ: ‘ಈಶ್ವರನ ಲಿಂಗ ಇರುವ ಬಾವಿ ನೀರಿನಲ್ಲಿ ಮುಸ್ಲಿಮರು ಕಾಲು ತೊಳೆದುಕೊಂಡು ಹೋಗುತ್ತಿದ್ದಾರೆ. ಅದನ್ನು ಹಿಂದೂಗಳು ಸಹಿಸಿಕೊಳ್ಳಬೇಕೆ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

‘ಅಂದಾಜು 350 ವರ್ಷಗಳ ಹಿಂದೆ ಬಾವಿಯಲ್ಲಿ ಈಶ್ವರನ ಲಿಂಗವನ್ನು ಹಾಕಿದ್ದಾರೆ. ಮುಸ್ಲಿಮರು ಅದೇ ನೀರಿನಿಂದ ಪಾದ ತೊಳೆದುಕೊಂಡು ಮಸೀದಿ ಒಳಗೆ ಹೋಗುತ್ತಿದ್ದಾರೆ. ಇದನ್ನು ಕೇಳಿದಾಗ ಹಿಂದೂಗಳಿಗೆ ಕಣ್ಣೀರಿನ ಜೊತೆಗೆ ಆಕ್ರೋಶವೂ ಬರುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಜ್ಞಾನವಾಪಿ ಮಸೀದಿಯ ಎದುರಿಗೆ ನಂದಿ ಇದೆ. ಆ ನಂದಿ ಮಸೀದಿಯನ್ನೇ ನೋಡುತ್ತಿದೆ. ಇದರ ಅರ್ಥ ಮಸೀದಿ ಒಳಗಿರುವ ಶಿವಲಿಂಗವನ್ನು ನೋಡುತ್ತಿದೆ ಎಂದೇ ಗ್ರಹಿಸಬಹುದು. ಅಲ್ಲದೇ ಅಲ್ಲಿ ಶೃಂಗಾರಗೌರಿ, ನಂದಿ, ಗಣೇಶ, ಆಂಜನೇಯನ ವಿಗ್ರಹಗಳೂ ಇದ್ದವು ಎನ್ನುವುದಕ್ಕೆ ಸಾಕ್ಷಿ ಇದೆ. ಇದೆಲ್ಲವನ್ನೂ ನೋಡಿದರೆ ಮುಸ್ಲಿಮರ ಆಕ್ರಮಣವೆಂಬುದು ತಿಳಿಯುತ್ತದೆ. ಇದು ದೇಶದ್ರೋಹವಲ್ಲದೇ ಮತ್ತೇನು’ ಎಂದು ಪ್ರಶ್ನೆ ಮಾಡಿದರು.

ADVERTISEMENT

‘ಇಸ್ಲಾಮಿಕ್ ಆಕ್ರಮಣಕಾರರು ಭಾರತದ 36 ಸಾವಿರ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದು, ಈ ಮಸೀದಿಗಳನ್ನೆಲ್ಲಾ ತೆರವುಗೊಳಿಸಿ ಅಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುವುದೇ ಹಿಂದೂ ಸಮಾಜದ ಮುಖ್ಯ
ಗುರಿ’ ಎಂದು ಹೇಳಿದರು.

‘ಅಯೋಧ್ಯೆ, ಕಾಶಿ, ಮಥುರಾ ಸೇರಿ ಭಾರತದ ಅನೇಕ ಕ್ಷೇತ್ರಗಳು ಹಿಂದೂಗಳ ಪುಣ್ಯಕ್ಷೇತ್ರಗಳಾಗಿವೆ. ಇಂತಹ ಪುಣ್ಯಕ್ಷೇತ್ರಗಳಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ಮಿಸಿದ್ದು, ಈಗ ಅಲ್ಲೆಲ್ಲಾ ಹಿಂದೂ ದೇವಾಲಯಗಳು ಇದ್ದವು ಎಂಬುದಕ್ಕೆ ಪುರಾವೆ ಸಿಕ್ಕುತ್ತಿದೆ. ಇದಕ್ಕೆ ಕಾಶಿಯಲ್ಲಿ ದೊರೆತ ಹನ್ನೆರಡು ಅಡಿ ಎತ್ತರದ ಶಿವಲಿಂಗವೇ ಸಾಕ್ಷಿ’ ಎಂದು ತಿಳಿಸಿದರು.

‘ಪವಿತ್ರ ಹಿಂದೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಕಾಲ ಬಂದಿದೆ. ಅಯೋಧ್ಯೆಯ ಚಿತ್ರಣ ಎಲ್ಲರಿಗೂ ಗೊತ್ತಿದೆ. ಕಾಶಿ, ಮಥುರಾದಲ್ಲೂ ಮಸೀದಿಗಳನ್ನು ತೆರವುಗೊಳಿಸಿ ಹಿಂದೂ ದೇವಾಲಯಗಳನ್ನು ಕಟ್ಟೇ ಕಟ್ಟುತ್ತೇವೆ. ಹಿಂದೂ ಸಮಾಜ ಇನ್ನು ಸುಮ್ಮನಿರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.