ADVERTISEMENT

ಶಿವಮೊಗ್ಗ | ಗಣಪ; ಎಲ್ಲೆಲ್ಲೂ ಪರಿಸರ ಸ್ನೇಹಿ ಮೂರ್ತಿ ಜಪ

ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ ಭಿನ್ನ –ವಿಭಿನ್ನ ವಿನಾಯಕ ಮೂರ್ತಿಗಳು

ನಾಗರಾಜ ಹುಲಿಮನೆ
Published 25 ಆಗಸ್ಟ್ 2025, 7:17 IST
Last Updated 25 ಆಗಸ್ಟ್ 2025, 7:17 IST
ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತ ಬಳಿಯ ಶ್ರೀರಾಮನಗರಲ್ಲಿ ಕಲಾವಿದರೊಬ್ಬರು ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುತ್ತಿರುವುದು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ
ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತ ಬಳಿಯ ಶ್ರೀರಾಮನಗರಲ್ಲಿ ಕಲಾವಿದರೊಬ್ಬರು ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಷ ನೀಡುತ್ತಿರುವುದು ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ   

ಶಿವಮೊಗ್ಗ: ಗಣೇಶೋತ್ಸವ ಅಂಗವಾಗಿ ಎಲ್ಲೆಡೆ ಗಣೇಶನ ಮೂರ್ತಿ ತಯಾರಿಕೆ ಜೋರಾಗಿ ನಡೆದಿದೆ. ಪರಿಸರ ಸ್ನೇಹಿ ವಿನಾಯಕ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. 

ನಗರದ ದ್ರೌಪದಮ್ಮ ವೃತ್ತದ ಶ್ರೀರಾಮನಗರ ಬಡಾವಣೆಯಲ್ಲಿರುವ ಕಲಾವಿದ ಶಿವರಾಜ ಅವರ ನಿವಾಸದಲ್ಲಿ ಆಕರ್ಷಕ ಜೇಡಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದ್ದು, ಗಮನ ಸೆಳೆಯುತ್ತಿವೆ. ಇಲ್ಲಿ 40 ವರ್ಷಗಳಿಂದ ವಿನಾಯಕ ಮೂರ್ತಿಗಳ ತಯಾರಿಸುವ ಕಾಯಕವನ್ನು ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ.  

ಯುಗಾದಿ ಮುಗಿಯುತ್ತಿದ್ದಂತೆ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ಕಲಾವಿದರು ತೊಡಗಿದ್ದರು.  ಜೇಡಿ ಮಣ್ಣನ್ನು ಹದ ಮಾಡಿ ತರಹೇವಾರಿ ಮಾದರಿಯ ಮೂರ್ತಿಗಳನ್ನು ತಯಾರಿಸಿದ್ದಾರೆ. ನಂದಿ, ಬಸವಣ್ಣ, ನವಿಲು, ಸಿಂಹ, ಹುತ್ತ, ಶ್ರೀರಾಮ, ಆಂಜನೇಯ.. ಹೀಗೆ ವಿಭಿನ್ನ ಆಕಾರ, ವಿವಿಧ ಗಾತ್ರಗಳ ಗಣಪತಿ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. 

ADVERTISEMENT

ಅರ್ಧ ಅಡಿಯಿಂದ 6 ಅಡಿವರೆಗಿನ 200ಕ್ಕೂ ಹೆಚ್ಚು ಮೂರ್ತಿಗಳು ಸಿದ್ಧಗೊಂಡಿದ್ದು, ಮೂರ್ತಿಗಳಿಗೆ ₹ 400ರಿಂದ ₹ 25,000ದ ವರೆಗೆ ದರ ನಿಗದಿ ಪಡಿಸಲಾಗಿದೆ. ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಜನರು ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. 

‘ಪಿಒಪಿ ಗಣಪತಿ ತಯಾರಿಕೆಯ ಕಲ್ಪನೆಯೂ ಇಲ್ಲ. ಮಣ್ಣಿನ ಮೂರ್ತಿ ತಯಾರಿಕೆ ಪಿಒಪಿ ಮೂರ್ತಿ ತಯಾರಿಕೆಗಿಂತ ತುಸು ಹೆಚ್ಚು ಸಮಯ, ಶ್ರಮ ಬೇಡುತ್ತದೆ. ಪರಿಸರ ಸಂರಕ್ಷಣೆ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಆದ್ದರಿಂದ ಬರೀ ಮಣ್ಣು ಹಾಗೂ ಅಡಿಕೆ ಮರದ ತಿರುಳು ಬಳಸಿ ವಿಗ್ರಹ ತಯಾರಿಸುತ್ತೇವೆ’ ಎಂದು ಕಲಾವಿದ ಶಿವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣಿನ ಗಣಪತಿ ಎಂದರೆ ಕೇವಲ ಮೂರ್ತಿಯಲ್ಲ. ಅದು ಪರಿಸರಸ್ನೇಹಿ ಭಕ್ತಿಯ ಪ್ರತೀಕ. ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಶ್ರೇಷ್ಠ ಮಾರ್ಗ ಇದಾಗಿದೆ. ಭಕ್ತಿ ಜತೆಗೆ ಜಾಗೃತಿ ಬೆಳೆದರೆ ಸಮಾಜ ಹೆಚ್ಚು ಹೊಣೆಗಾರಿಕೆಯಿಂದ ಬದುಕಲು ಸಾಧ್ಯ’ ಎನ್ನುತ್ತಾರೆ ಮತ್ತೊಬ್ಬ ಕಲಾವಿದ ನಾಗರಾಜ. 

‘ಮಣ್ಣಿನ ಗಣೇಶ ಮೂರ್ತಿಗಳಿಗೆ ಕಲೆಯ ಮೂಲಕ ಜೀವ ತುಂಬುತ್ತೇವೆ. ಗ್ರಾಮೀಣ ಜನರಿಗೆ ಇದೊಂದು ಉದ್ಯೋಗವೂ ಹೌದು. ಆದ್ದರಿಂದ ಹೊರ ಜಿಲ್ಲೆಗಳಿಂದ ಮೂರ್ತಿಗಳನ್ನು ತಂದು ಮಾರಾಟ ಮಾಡಲು ವ್ಯಾಪಾರಿಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು’ ಎಂಬುದು ಸ್ಥಳೀಯ ಕಲಾವಿದರ ಒತ್ತಾಯ.

ಜಿಲ್ಲೆಯಲ್ಲಿ ಕುಂಸಿ, ಆಯನೂರು, ಹಾರನಹಳ್ಳಿ, ಕುಂಬಾರಗುಂಡಿ, ಹೊಳಲೂರು, ಹೊಳೆಹೊನ್ನೂರು ಸೇರಿದಂತೆ ನಗರ ಭಾಗದ ವಿದ್ಯಾನಗರ, ಬಿ.ಬಿ.ಸ್ಟ್ರೀಟ್, ಗೋಪಾಳ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳು ಸಿದ್ಧವಾಗುತ್ತಿವೆ.

ನಾಗರಾಜ
ಶಿವಮೊಗ್ಗದ ವಿನೋಬನಗರದಲ್ಲಿನ ಶಿವಾಲಯ ಮುಂಭಾಗ ಗಣೇಶನ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿರುವುದು
ನಗರದಲ್ಲಿ ಪಿಒಪಿ ಗಣಪತಿ ತಯಾರಿಕೆ ಕಂಡುಬಂದಿಲ್ಲ. ಶಿವಮೊಗ್ಗ ಜನರು ‘ಪರಿಸರ ಸ್ನೇಹಿ’ ಗಣಪತಿ ಮೂರ್ತಿಯತ್ತ ಒಲವು ತೋರುತ್ತಿದ್ದಾರೆ
ಮಾಯಣ್ಣ ಗೌಡ ಆಯುಕ್ತ ಮಹಾನಗರ ಪಾಲಿಕೆ
ಕಲಾವಿದರಿಗೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆತಿಲ್ಲ. ಮುಂದಿನ ದಿನದಲ್ಲಿ ‌ಈ ಕುರಿತು ಸರ್ಕಾರ ಗಮನ ಹರಿಸಲಿ
ಶಿವರಾಜ ಕಲಾವಿದ

ಪರಿಸರಸ್ನೇಹಿ ಗಣಪಗೆ ಬಹುಮಾನ  ಪ್ರಕೃತಿಯೊಡನೆ ಹೊಂದಿಕೊಂಡ ಬದುಕು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಅದರಲ್ಲಿ ಮಣ್ಣಿನ ಗಣಪತಿಗೆ ವಿಶೇಷ ಸ್ಥಾನವಿದೆ. ಆದರೆ ಇಂದಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳು ಪರಿಸರಕ್ಕೆ ದೊಡ್ಡ ಹಾನಿ ಮಾಡುತ್ತಿವೆ. ಆದ್ದರಿಂದ ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಆಯ್ದ ಯುವಕರ ತಂಡಗಳಿಗೆ ‘ಪಾರಿತೋಷಕ’ ಬಹುಮಾನ ನೀಡಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಎನ್.ಆನಂದ ರಾವ್ ಜಾಧವ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಥಳೀಯರ ದುಡಿಮೆಗೆ ಪೆಟ್ಟು’

ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ನೂರಾರು ಕಲಾವಿದರ ಕುಟುಂಬಗಳಿವೆ. ಶಿವಮೊಗ್ಗ ನಗರವೊಂದರಲ್ಲೇ 30 ರಿಂದ 40 ಕುಟುಂಬಗಳು ಇದನ್ನೇ ವೃತ್ತಿಯಾಗಿಸಿಕೊಂಡಿವೆ. ಇದೀಗ ಮೂಲ ಕಲಾವಿದರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ನಡುವೆ ಅಚ್ಚೊತ್ತಿದ ಮೂರ್ತಿಗಳನ್ನು ಹೊರ ಜಿಲ್ಲೆಗಳಿಂದ ತಂದು ಮನಬಂದಂತೆ ದರ ನಿಗದಿಪಡಿಸಿ ಮಾರಾಟ ಮಾಡುವುದು ಸ್ಥಳೀಯರ ದುಡಿಮೆಗೆ ಪೆಟ್ಟು ನೀಡುತ್ತಿದೆ ಎಂದು ಕಲಾವಿದ ರಘು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.