ADVERTISEMENT

ಶಿವಮೊಗ್ಗ: ಪಾರ್ಶ್ವವಾಯುಗೆ ತುತ್ತಾಗಿದ್ದ ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್!

ತಡರಾತ್ರಿ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:55 IST
Last Updated 7 ಫೆಬ್ರುವರಿ 2026, 5:55 IST
<div class="paragraphs"><p>ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್</p></div>

ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್

   

ಶಿವಮೊಗ್ಗ: ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾಗೆ (15) ಚಿಕಿತ್ಸೆಯ ಭಾಗವಾಗಿ ಶುಕ್ರವಾರ ತಡರಾತ್ರಿ ಇಲ್ಲಿನ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.

ಚಿರತೆ ಭದ್ರಾ ಕೆಲ ದಿನಗಳಿಂದ ಕಾಲುಗಳ ಸ್ವಾಧೀನವಿಲ್ಲದೇ ಓಡಾಡಲು ಸಾಧ್ಯವಿಲ್ಲದಂತಾಗಿತ್ತು. ಅದು ಬೆನ್ನು ಹುರಿಗೆ ಪೆಟ್ಟು ಬಿದ್ದು ಇಲ್ಲವೇ ಯಾವುದಾದರೂ ಸೋಂಕಿಗೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವೈದ್ಯರು ಎಂಆರ್‌ಐ ಸ್ಕ್ಯಾನ್ ಗೆ ಶಿಫಾರಸು ಮಾಡಿದ್ದರು.

ADVERTISEMENT

ಚಿರತೆಯ ಎಂಆರ್‌ಐ ಸ್ಕ್ಯಾನ್ ಮಾಡಲು ನಂಜಪ್ಪ ಆಸ್ಪತ್ರೆಯ ಆಡಳಿತ ಒಪ್ಪಿಗೆ ಸೂಚಿಸಿತ್ತು. ಹಗಲು ಹೊತ್ತು ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ ಹೆದರಿಕೊಳ್ಳಬಹುದು ಎಂಬ ಕಾರಣಕ್ಕೆ ತಡರಾತ್ರಿ ಚಿರತೆಯನ್ನು ಆಸ್ಪತ್ರೆಗೆ ಕರೆತರಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿತ್ತು.

ಅದರಂತೆ ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಅಮರಾಕ್ಷರ ಹಾಗೂ ವನ್ಯಜೀವಿ ವೈದ್ಯ ಡಾ.ಮುರಳಿಮೋಹನ್ ನೇತೃತ್ವದ ತಂಡ ಚಿರತೆಯನ್ನು ಆಸ್ಪತ್ರೆಗೆ ಕರೆತಂದಿತ್ತು. ಒಂದೂವರೆ ಗಂಟೆ ಅವಧಿಗೆ ಚಿರತೆಗೆ ಅರೆವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಎಂಆರ್ ಐ ಸ್ಕ್ಯಾನ್ ಗೆ ಒಳಪಡಿಸಲಾಯಿತು. ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ತಜ್ಞರು, ಸಿಬ್ಬಂದಿ ಹೀಗೊಂದು ವಿಶಿಷ್ಟ ಪ್ರಯೋಗಕ್ಕೆ ಸಹಕರಿಸಿದರು.

'ಚಿರತೆಯನ್ನು ಪರೀಕ್ಷೆಗೆ ಒಳಪಡಿಸಿದ್ದರಿಂದ ಅದಕ್ಕೆ ವಯೋಸಹಜವಾಗಿಯೇ ಪಾರ್ಶ್ವವಾಯು ತಗುಲಿರುವುದು ಗೊತ್ತಾಗಿದೆ. ಯಾವುದೇ ಪೆಟ್ಟು ಬಿದ್ದಿರುವ, ಸೋಂಕಿನ ಕುರುಹು ಕಂಡುಬಂದಿಲ್ಲ. ಅದರ ಆರೋಗ್ಯ ಸ್ಥಿರವಾಗಿದ್ದು, ಹುಲಿ-ಸಿಂಹಧಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿದ್ದೇವೆ' ಎಂದು ವೈದ್ಯ ಡಾ.ಮುರಳಿಮೋಹನ್ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಚಿರತೆ ಭದ್ರಾಗೆ ಎಂಆರ್‌ಐ ಸ್ಕ್ಯಾನಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.