ಸಂದೀಪ್, ಆದಿತ್ಯ
ಶಿವಮೊಗ್ಗ: ಇಲ್ಲಿನ ಸಾಗರ ರಸ್ತೆಯ ಸರ್ಕ್ಯೂಟ್ ಹೌಸ್ ವೃತ್ತದಲ್ಲಿ ಬುಧವಾರ ಬೆಳಗಿನ ಜಾವ ಬೈಕ್ ಹಾಗೂ ನಂದಿನಿ ಹಾಲು ಸಾಗಣೆ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಮತ್ತು ನಂದಿನಿ ಹಾಲಿನ ವಾಹನ ಮುಖಾಮುಖಿ ಡಿಕ್ಕಿಯಾಗಿವೆ.
ಬೈಕ್ ನಲ್ಲಿದ್ದ ಇಲ್ಲಿನ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಉಡುಪಿಯ ಆದಿತ್ಯ (22) ಮತ್ತು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯ ಸಂದೀಪ್ (22) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಸ್ತೆಯ ಮೇಲೆ ರಕ್ತ ಮಡುವಿನಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಸಾವಿಗೀಡಾಗಿರುವುದು ಹಾಗೂ ವಾಹನದಲ್ಲಿದ್ದ ಹಾಲಿನ ಕ್ರೇಟ್‌ಗಳೆಲ್ಲ ಕೆಳಗೆ ಬಿದ್ದು ಪ್ಯಾಕೆಟ್‌ಗಳು ಒಡೆದು ಹಾಲು ರಸ್ತೆಯ ಮೇಲೆ ಹರಿದಿದ್ದು ಅಪಘಾತದ ಭೀಕರತೆಯನ್ನು ಬಿಂಬಿಸುತ್ತಿತ್ತು.
ವಿದ್ಯಾರ್ಥಿಗಳಿಬ್ಬರೂ ಬೆಳಗಿನ ಜಾವ ಬೈಕ್‌ಗೆ ಸಮೀಪದ ಭಾರ್ಗವಿ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ವಾಪಸ್ ಕಾಲೇಜಿನ ಹಾಸ್ಟೆಲ್‌ಗೆ ಮರಳುವಾಗ ಎದುರಿಗೆ ಬಂದ ಹಾಲಿನ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.