ADVERTISEMENT

ಶಿವಮೊಗ್ಗ | ನಾಗರ ವಿಗ್ರಹ ಕಿತ್ತ ಆರೋಪ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 19:05 IST
Last Updated 6 ಜುಲೈ 2025, 19:05 IST
ಶಿವಮೊಗ್ಗ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ನಿರ್ಮಿಸಿರುವ ದೇವರ ವಿಗ್ರಹ
ಶಿವಮೊಗ್ಗ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ನಿರ್ಮಿಸಿರುವ ದೇವರ ವಿಗ್ರಹ   

ಶಿವಮೊಗ್ಗ: ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ರಾತ್ರಿ ದೇವರ ವಿಗ್ರಹಗಳನ್ನು ಕೀಳಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್ ತಿಳಿಸಿದ್ದಾರೆ.

‘ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಎದುರು ಖಾಲಿ ಜಾಗವಿದೆ. ಇಲ್ಲಿ ಕಟ್ಟೆ ನಿರ್ಮಿಸಿ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಕಟ್ಟಡದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ವಾಸವಿದ್ದ. ಶನಿವಾರ ಈ ಕಟ್ಟಡದ ಬಳಿ ಬಂದಿದ್ದ ಆತನ ಸ್ನೇಹಿತ,  ನಾಗರ ವಿಗ್ರಹ ಕಲ್ಲನ್ನು ಕಿತ್ತು ಎಸೆದಿದ್ದಾನೆ’ ಎಂದು ಸ್ಥಳೀಯರು ಆರೋಪಿಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. 

‘ಬಡವಾಣೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ರಾಗಿಗುಡ್ಡ ಶಾಂತವಾಗಿದೆ. ಇಲ್ಲಿ ಶಾಂತಿ ಪಡೆ ಸಕ್ರಿಯವಾಗಿದೆ. ಈ ಭಾಗದಲ್ಲಿ ಎಲ್ಲ ಧರ್ಮದವರೂ ಇದ್ದಾರೆ. ಆದರೆ, ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸಲು ಅಪಪ್ರಚಾರ ಮಾಡುತ್ತಿದ್ದಾರೆ. ಬೇರೆ ಕಡೆಯಿಂದ ಬಂದ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ’ ಎಂದು ಶಾಂತಿ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯದೇವಪ್ಪ ಸ್ಪಷ್ಟಪಡಿಸಿದರು.

ADVERTISEMENT

ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಬಡಾವಣೆಯಲ್ಲಿ ಎಲ್ಲ ಧರ್ಮದವರೂ ಸಹಬಾಳ್ವೆಯಿಂದ ಇದ್ದೇವೆ. ಗಲಾಟೆ ಉದ್ವಿಗ್ನ ಪರಿಸ್ಥಿತಿ ಇಲ್ಲ. ಸುಳ್ಳು ಸುದ್ದಿ ಹರಡಬೇಡಿ
ಮಹಮ್ಮದ್ ಮುಜೀಬ್ ರೆಹಮಾನ್, ಸ್ಥಳೀಯರು ಬಂಗಾರಪ್ಪ ಬಡಾವಣೆ

ತಪ್ಪಿತಸ್ಥರ ವಿರುದ್ಧ ಕ್ರಮ: ಎಸ್ಪಿ

‘ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಿಮೆಂಟ್‌ ಕಟ್ಟೆ ಮೇಲಿದ್ದ ವಿಗ್ರಹ ಕಿತ್ತಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆ ಸಂಬಂಧ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.