ADVERTISEMENT

ಶಿವಮೊಗ್ಗ: ಕಲಾಪದ ವೇಳೆ 400 ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 3:03 IST
Last Updated 3 ಮಾರ್ಚ್ 2026, 3:03 IST
ಶಿವಮೊಗ್ಗದಲ್ಲಿ ಸೋಮವಾರ ಮಧು ಬಂಗಾರಪ್ಪ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸಚಿವ ಮಧು ಬಂಗಾರಪ್ಪ ಕುಕ್ಕರ್ ನೀಡಿ ಗೌರವಿಸಿದರು
ಶಿವಮೊಗ್ಗದಲ್ಲಿ ಸೋಮವಾರ ಮಧು ಬಂಗಾರಪ್ಪ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸಚಿವ ಮಧು ಬಂಗಾರಪ್ಪ ಕುಕ್ಕರ್ ನೀಡಿ ಗೌರವಿಸಿದರು   

ಶಿವಮೊಗ್ಗ: ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ಕಲಾಪ ವೀಕ್ಷಣೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ 400 ಪೌರ ಕಾರ್ಮಿಕರನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದು ವಾಪಸ್ ಕರೆತರುವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ಎಸ್. ಮಧು ಬಂಗಾರಪ್ಪ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಕೇಕ್‌ ಕತ್ತರಿಸಿ, ಪೌರ ಕಾರ್ಮಿಕರಿಗೆ ಕುಕ್ಕರ್ ವಿತರಿಸಿ ಮಾತನಾಡಿದರು.

ಶಿವಮೊಗ್ಗ ನಗರ ಇಷ್ಟೊಂದು ಸ್ವಚ್ಛವಾಗಿದೆ ಅಂದರೆ ಅದಕ್ಕೆ ಪೌರ ಕಾರ್ಮಿಕರೇ ಕಾರಣ. ಹೀಗಾಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಬರೀ ಸೊರಬದವರು ಮಾತ್ರ ಪಡೆಯುವುದು ಬೇಡ. ಶಿವಮೊಗ್ಗದವರೂ ಓಡಾಡಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. 

ADVERTISEMENT

‘ಬಂಗಾರಪ್ಪ ಅವರ ಆಶೀರ್ವಾದದಿಂದ ಅವರ ಪುತ್ರನಾಗಿ ಇದನ್ನೆಲ್ಲ ಮಾಡಲು ಸಾಧ್ಯವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ವಿಮಾನ ಹತ್ತಲು ಸಾಧ್ಯವಾಗಿದೆ. ಹೀಗಾಗಿ ಇದೆಲ್ಲ ಪುಣ್ಯದ ಕೆಲಸ’ ಎಂದು ಹೇಳಿದರು.

‘ನನ್ನ ಹುಟ್ಟುಹಬ್ಬ ಎಲ್ಲರ ಸಂಭ್ರಮವಾಗಿ ಮಾರ್ಪಟ್ಟಿದೆ. ನಾನು ಅದೃಷ್ಟ ಮಾಡಿದ್ದೇನೆ. ನಿಮ್ಮೆಲ್ಲರ ಪ್ರೀತಿ–ವಿಶ್ವಾಸದ ಫಲವಾಗಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ. ಇನ್ನೊಂದೆಡೆ ಶಿಕ್ಷಣ ಖಾತೆಯ ಮೂಲಕ ರಾಜ್ಯದ ಮಕ್ಕಳ ಸೇವೆ ಮಾಡುವ ಅವಕಾಶ ಸಿಎಂ ಹಾಗೂ ಡಿಸಿಎಂ ನೀಡಿದ್ದು, ಪಕ್ಷದ ಹೈಕಮಾಂಡ್ ಕೂಡ ಬೆಂಬಲಿಸಿದೆ. ಮಕ್ಕಳನ್ನು ದೇವರ ಸ್ಥಾನದಲ್ಲಿ ನೋಡುತ್ತೇನೆ. ಒಳ್ಳೆಯ ಶಿಕ್ಷಣ ಕೊಟ್ಟರೆ ಸಮಾನತೆ ಸಹಜವಾಗಿಯೇ ಬರುತ್ತದೆ’ ಎಂದು ತಿಳಿಸಿದರು.

ಸನ್ಮಾನಕ್ಕೆ ನೂಕು ನುಗ್ಗಲು:

ಹುಟ್ಟುಹಬ್ಬ ಆಚರಣೆ ಉಸ್ತುವಾರಿ ಸಚಿವರಿಗೆ ಸನ್ಮಾನಕ್ಕೆ ನೂಕು ನುಗ್ಗಲು ಉಂಟಾಯಿತು. ಕಾಂಗ್ರೆಸ್‌ ಜಿಲ್ಲಾ ಘಟಕ, ಮಹಿಳಾ ಘಟಕ, ಎನ್‌ಎಸ್‌ಯುಐ ಸೇರಿದಂತೆ ಪಕ್ಷದ ಬೇರೆ ಬೇರೆ ಘಟಕಗಳು, ಜಿಲ್ಲಾ ಆರ್ಯ ಈಡಿಗರ ಸಂಘ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಮಹಾನಗರ ಪಾಲಿಕೆ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕಿವುಡ ಮತ್ತು ಶ್ರವಣ ದೋಷವುಳ್ಳವರ ಜಿಲ್ಲಾ ಸಂಘ, ಛಲವಾದಿ ಸಂಘ. ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಮ್ಮೂರ ಗೆಳೆಯರ ಬಳಗದಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೇಕ್ ವಿತರಿಸಲಾಯಿತು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಕಲಗೋಡು ರತ್ನಾಕರ, ಜಿ.ಡಿ. ಮಂಜುನಾಥ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮುಖಂಡರಾದ ಎಚ್.ಸಿ. ಯೋಗೀಶ್, ಎಂ. ಶ್ರೀಕಾಂತ್, ಎಸ್.ಕೆ. ಮರಿಯಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೋಹನ್‌ಕುಮಾರ್ ಪಾಲ್ಗೊಂಡಿದ್ದರು.

ನೇಗಿಲು ಕೊಡುಗೆ:

ತುಂಗಾ ಮೇಲ್ದಂಡೆ ಯೋಜನೆಗೆ ಎಸ್‌. ಬಂಗಾರಪ್ಪ ಅವಕಾಶ ಮಾಡಿಕೊಟ್ಟ ಕಾರಣ ಅದರ ಸ್ಮರಣೆಗೆ ಹೊನ್ನಾಳಿಯ ರೈತರು ಮುಖಂಡ ಉಮಾಪತಿ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರಿಗೆ ನೇಗಿಲಿನ ಪ್ರತಿಕೃತಿ ನೀಡಿ ಶುಭ ಹಾರೈಸಲಾಯಿತು. ಚಿನ್ನದ ಲೇಪನ ಇರುವ ನಾಣ್ಯಗಳ ಹಾರವನ್ನು ಹಾಪ್‌ಕಾಮ್ಸ್ ಅಧ್ಯಕ್ಷ ಸಂತೆಕಡೂರು ವಿಜಯಕುಮಾರ್ ಅವರು ಮಧು ಬಂಗಾರಪ್ಪ ಅವರಿಗೆ ಹಾಕಿ ಶುಭ ಕೋರಿದರು.

ಬೆಳಿಗ್ಗೆ ಜೆಪಿಎಸ್‌ನ ರಸ್ತೆಯ ಕಾಮಾಕ್ಷಿ ಗಣಪತಿ ದೇವಸ್ಥಾನದಲ್ಲಿ ಡಿ.ಕೆ. ಶಿವಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಮೋಹನ್, ಕಾಂಗ್ರೆಸ್‌ ಹಿಂದುಳಿದ ವರ್ಗಗಳ  ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಡಿ. ಮಂಜುನಾಥ್, ಸಾಧು–ಶೆಟ್ಟಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉಮಾಪತಿ, ರಮೇಶ್‌ ಶಂಕರಘಟ್ಟ, ಜಿತೇಂದ್ರ ಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶರತ್‌ ಮರಿಯಪ್ಪ ನೇತೃತ್ವದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಗಿಗಳಿಗೆ ಹಣ್ಣು–ಹಂಪಲು ವಿತರಿಸಲಾಯಿತು.

ಬೆಂಗಳೂರಿನಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆಗೆ ಸೊರಬ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಸೋಮವಾರ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಿಂದ ವಿಮಾನದಲ್ಲಿ ಕರೆದೊಯ್ದರು
ಬಡವರು ಶೋಷಿತರ ಪರವಾಗಿ ಬಂಗಾರಪ್ಪ ಅವರಿಗೆ ಇದ್ದ ಕಾಳಜಿ ಪುತ್ರ ಮಧು ಬಂಗಾರಪ್ಪ ಅವರಿಗೂ ಬಂದಿದೆ. ಶೀಘ್ರ ಅವರು ಉಪಮುಖ್ಯಮಂತ್ರಿ ಆಗಲಿ ಎಂದು ಅಮ್ಮನ ರೀತಿ ಆಶೀರ್ವಾದ ಮಾಡುವೆ.
ಬಲ್ಕೀಶ್ ಬಾನು ವಿಧಾನಪರಿಷತ್ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.