ADVERTISEMENT

ತಾಯಿ ಕಾರ್ಡ್‌: ಗರ್ಭಿಣಿಯರು ವಂಚಿತರಾಗದಿರಲಿ; ಶಾಸಕಿ ಶಾರದಾ

ಶಾಸಕಿ ಶಾರದಾ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 15:55 IST
Last Updated 28 ಜೂನ್ 2023, 15:55 IST
ಶಿವಮೊಗ್ಗ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್  ಮಾತನಾಡಿದರು.
ಶಿವಮೊಗ್ಗ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್  ಮಾತನಾಡಿದರು.   

ಶಿವಮೊಗ್ಗ: ತಾಲ್ಲೂಕಿನಲ್ಲಿ ತಾಯಿ ಕಾರ್ಡ್ ಪಡೆಯಲು ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಸೂಕ್ಷ್ಮವೆಂದು ಪರಿಗಣಿಸಿ, ಅವರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಯಿ ಕಾರ್ಡ್ ವಿಚಾರವಾಗಿ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಗರ್ಭಾವ್ಯವಸ್ಥೆ ಹಾಗೂ ಹೆರಿಗೆಯ ನಂತರವೂ ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಸರ್ಕಾರ ತಾಯಿ ಕಾರ್ಡ್‌ ಯೋಜನೆ ಆರಂಭಿಸಿದೆ. ಆಸ್ಪತ್ರೆಗೆ ಬರುವ ಯಾವುದೇ ಗರ್ಭಿಣಿಯು ತಾಯಿ ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ, ನೋಂದಣಿ ಮಾಡಿಸಿ ತಾಯಿ ಕಾರ್ಡ್‌ ಹಾಗೂ ಮತ್ತಿತರ ಸವಲತ್ತು ನೀಡುವ ಹೊಣೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಮಾಡಬೇಕು ಎಂದು ತಾಕೀತು ಮಾಡಿದರು.

ADVERTISEMENT

ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ. ಪಿಳ್ಳಂಗೇರಿ, ಬಿ.ಬೀರನಹಳ್ಳಿ ಗ್ರಾಮದ ಜನರು ಇದರಿಂದ ಹೆಚ್ಚು ತೊಂದರೆ ಎದುರಿಸುತ್ತಿರುವುದು ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

ರೈತರಿಗೆ ಸಮಸ್ಯೆ ಆಗದಂತೆ ಬಿತ್ತನೆ ಬೀಜ, ಗೊಬ್ಬರ ಸಮರ್ಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಸಹಾಯಧನದ ಮೂಲಕ ಅವರಿಗೆ ದೊರೆಯಬೇಕಾದ ಕೃಷಿ ಉಪಕರಣಗಳು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ಸಿಗುವಂತಾಗಬೇಕು. ರೈತಪರ ಯೋಜನೆಗಳ ಅರಿವು ಮೂಡಿಸಬೇಕು. ತಾಲ್ಲೂಕಿನ ಶಾಲೆಗಳಲ್ಲಿ ತುರ್ತು ಕೊಠಡಿ ದುರಸ್ತಿ, ಮಳೆ ಪರಿಹಾರದ ಕಾರ್ಯಕ್ರಮಗಳು, ಆದರ್ಶ ಗ್ರಾಮ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಂದಿನಿ, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಅವಿನಾಶ್ ಇದ್ದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಮಳೆಗಾಲ ಆರಂಭವಾಗುತ್ತಿದೆ. ಜನರು ವಾಂತಿ ಭೇದಿ ಡೆಂಗಿಯಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ತಾಲ್ಲೂಕು ಪ್ರಾಥಮಿಕ ಕೇಂದ್ರಗಳಲ್ಲಿ ಔಷಧೋಪಚಾರಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕು. ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರತಿ ದಿನ ದೂರುಗಳು ಕೇಳಿ ಬರುತ್ತಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಕೊಳವೆಬಾವಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾರದಾ ಪೂರ‍್ಯಾನಾಯ್ಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.