ADVERTISEMENT

ಶಿವಮೊಗ್ಗ: ಹೂವಿನಕೋಣೆ; ನೀರಿನ ಟ್ಯಾಂಕ್‌ಗೆ ವಿಷ ಹಾಕಿದ್ದು ವಿದ್ಯಾರ್ಥಿ!

ಹೊಸನಗರ ತಾಲ್ಲೂಕಿನ ಹೂವಿನಕೋಣೆ ಶಾಲೆಯಲ್ಲಿ ನಡೆದಿದ್ದ ಘಟನೆ: ಪೊಲೀಸರ ತನಿಖೆಯಲ್ಲಿ ಬಯಲು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 20:41 IST
Last Updated 3 ಆಗಸ್ಟ್ 2025, 20:41 IST
   

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಹೂವಿನಕೋಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಅದೇ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯೇ ಕೀಟನಾಶಕ ಬೆರೆಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಕೀಟನಾಶಕದ ವಾಸನೆ ಬಂದಿದ್ದು, ಆತನ ಕೈ ಕೂಡ ವಾಸನೆಯಿಂದ ಕೂಡಿತ್ತು. ಕರೆದು ವಿಚಾರಣೆ ನಡೆಸಿದಾಗ ಪೋಷಕರು ಶುಂಠಿ ಬೆಳೆಯ ರೋಗಕ್ಕೆ ಹಾಕಲು ಮನೆಯಲ್ಲಿ ಇಟ್ಟಿದ್ದ ಔಷಧಿಯನ್ನು ತಂದು ನೀರಿನ ಟ್ಯಾಂಕ್‌ಗೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಎಲ್ಲರ ಗಮನ ಸೆಳೆಯಲು, ಕುತೂಹಲಕ್ಕಾಗಿ ಕೃತ್ಯವೆಸಗಿದ್ದಾಗಿ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ. 

‘ಕೆಲ ದಿನಗಳ ಹಿಂದೆ ಎರಡನೇ ತರಗತಿ ವಿದ್ಯಾರ್ಥಿ ಶೌಚಾಲಯದಲ್ಲಿ ಇಟ್ಟಿದ್ದ ಫಿನಾಯಿಲ್ ತಂದು ಶಾಲೆಯಲ್ಲಿ ಇಟ್ಟಿದ್ದ ಕುಡಿಯುವ ನೀರಿನ ಬಾಟಲಿಗೆ ಹಾಕಿದ್ದ. ಅದನ್ನು ಗಮನಿಸಿದ್ದ ಶಿಕ್ಷಕರು ಆ ನೀರು ಚೆಲ್ಲಿ, ಆ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿದ್ದರು. ಆ ನಂತರ ಎಲ್ಲರೂ ಎರಡನೇ ತರಗತಿ ವಿದ್ಯಾರ್ಥಿ ಬಗ್ಗೆ ಮಾತನಾಡುತ್ತಿದ್ದರು. ಇದು ಟ್ಯಾಂಕ್‌ಗೆ ಕೀಟನಾಶಕ ಬೆರೆಸಲು 5ನೇ ತರಗತಿ ವಿದ್ಯಾರ್ಥಿಗೆ ಪ್ರೇರಣೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

‘ಕೃತ್ಯವೆಸಗಿದ ಬಾಲಕ ಶಾಲೆಯ ವಿದ್ಯಾರ್ಥಿ ಪರಿಷತ್‌ನಲ್ಲಿ ‘ಮುಖ್ಯಮಂತ್ರಿ’ ಆಗಿದ್ದ. ಹೀಗಾಗಿ ನಿತ್ಯ ಶಿಕ್ಷಕರು ಹಾಗೂ ಇತರೆ ವಿದ್ಯಾರ್ಥಿಗಳಿಗಿಂತ ಮುಂಚೆ ಬಂದು ಕೊಠಡಿಗಳ ಸ್ವಚ್ಛತೆ, ಟ್ಯಾಂಕ್‌ಗಳಲ್ಲಿ ಇರುವ ನೀರಿನಮಟ್ಟ ಪರಿಶೀಲಿಸುತ್ತಿದ್ದ. ಅದೇ ರೀತಿ ಜುಲೈ 31ರಂದು ಮೊದಲೇ ಶಾಲೆಗೆ ಬಂದಿದ್ದು, ಟ್ಯಾಂಕ್‌ನಲ್ಲಿ ಕೀಟನಾಶಕ ಬೆರೆಸಿದ್ದ’ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.