ADVERTISEMENT

ಶಿವಮೊಗ್ಗ: ಸಂಕೇತ್‌ ಹತ್ಯೆಗೆ ಕ್ರಿಕೆಟ್ ಅಲ್ಲ, ಗಾಂಜಾ ಕಾರಣ?

ಕಾನೂನು ಸಂಘರ್ಷಕ್ಕೊಳಗಾದ ಏಳು ಬಾಲಕರಿಂದ ಗುಂಪು ಹಲ್ಲೆ

ವೆಂಕಟೇಶ ಜಿ.ಎಚ್.
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
ಶಿವಮೊಗ್ಗದ ಸೂಳೆಬೈಲ್‌ನ ದುರ್ಗಮ್ಮನ ಬೀದಿಯಲ್ಲಿರುವ ಸಂಕೇತ್ ನಿವಾಸ
ಶಿವಮೊಗ್ಗದ ಸೂಳೆಬೈಲ್‌ನ ದುರ್ಗಮ್ಮನ ಬೀದಿಯಲ್ಲಿರುವ ಸಂಕೇತ್ ನಿವಾಸ   

ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ಊರಗಡೂರಿನಲ್ಲಿ ಫೆ. 23ರಂದು ರಾತ್ರಿ ಕಾನೂನು ಸಂಘರ್ಷಕ್ಕೆ ಒಳಗಾದ ಏಳು ಬಾಲಕರ ಗುಂಪು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಕ್ಕೆ ಕ್ರಿಕೆಟ್ ಪಂದ್ಯದ ವೈಮನಸ್ಸು ಕಾರಣವಲ್ಲ. ಬದಲಿಗೆ, ‘ಗಾಂಜಾ ಅಮಲು’ ಕಾರಣ ಎಂಬ ಸಂಗತಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

‘ಮಗ ಕಬಡ್ಡಿ ಆಡುತ್ತಿದ್ದ. ಆ ಗುಂಪಿನಲ್ಲಿದ್ದ ಬಾಲಕರೊಂದಿಗೆ ಯಾವತ್ತೂ ಕ್ರಿಕೆಟ್ ಆಡಲು ಹೋಗಿಲ್ಲ. ಕ್ರಿಕೆಟ್ ಆಡುವಾಗಿನ ಜಗಳ ಎಂಬುದೆಲ್ಲ ತಪ್ಪು ಮಾಹಿತಿ’ ಎಂದು ಸಂಕೇತ್‌ನ ತಂದೆ ಶಿವಕುಮಾರ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಅತಿಯಾದ ಗಾಂಜಾ ಅಮಲು:

‘ವಾರದ ಹಿಂದೆ ಸಂಕೇತ್‌ ಓದುತ್ತಿದ್ದ ಸರ್ಕಾರಿ ಶಾಲೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ಶಾಲೆಯ ನಾಲ್ವರು ಹಳೆಯ ವಿದ್ಯಾರ್ಥಿಗಳು ಕುಳಿತು ಗಾಂಜಾ ಸೇದುತ್ತಿದ್ದರು. ಆ ಗುಂಪಿನಲ್ಲಿದ್ದ ಹುಡುಗನೊಬ್ಬ ಮತ್ತಿನಲ್ಲಿ ಶಾಲೆಯತ್ತ ಕಲ್ಲು ಎಸೆದಿದ್ದಾನೆ. ಅದು ಕಿಟಕಿ ಬಳಿ ಕುಳಿತಿದ್ದ ಸಂಕೇತ್‌ಗೆ ತಗುಲಿದೆ. ಅದು ಶಿಕ್ಷಕರ ಗಮನಕ್ಕೆ ಬರುತ್ತಿದ್ದಂತೆಯೇ, ತುಂಗಾ ನಗರ ಠಾಣೆಯ ಪೊಲೀಸರನ್ನು ಕರೆಯಿಸಿ ಕಲ್ಲು ಹೊಡೆದವರನ್ನು ಎಳೆದು ತಂದು ಎಚ್ಚರಿಕೆ ನೀಡಿದ್ದಾರೆ. ಪಾಲಕರ ಗಮನಕ್ಕೂ ತಂದು ಶಾಲೆಯ ಬಳಿಯೇ ಆ ಬಾಲಕರ ಉದ್ದುದ್ದನೆಯ ಕೂದಲನ್ನು ಕತ್ತರಿಸಿ ಕಳಿಸಿದ್ದಾರೆ. ಇದನ್ನೇ ಮನಸ್ಸಿನ ಲ್ಲಿಟ್ಟುಕೊಂಡ ಗುಂಪು ಸಂಕೇತ್‌ನ ವಿರುದ್ಧ ಹಗೆ ಸಾಧಿಸಿದೆ’ ಎಂದು ಶಿವಕುಮಾರ್ ಅವರ ಸ್ನೇಹಿತ ಅನೀಸ್‌ ಹೇಳಿದರು.

ADVERTISEMENT

‘ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂಬ ಕಾರಣಕ್ಕೆ ಪಕ್ಕದ ಭಾಸ್ಕರ್‌ ನಗರದಲ್ಲಿ ವಾಸವಿದ್ದ ಶಾಲೆಯ ಶಿಕ್ಷಕಿಯ ಮನೆಗೂ ಆ ಹುಡುಗರು ಕಲ್ಲು ಹೊಡೆದಿದ್ದರು. ಹೆದರಿಕೊಂಡು ಅವರು ಮನೆ ಬದಲಾಯಿಸಿದ್ದರು. ಆಗಲೇ ಪೊಲೀಸರಿಗೆ ದೂರು ಕೊಟ್ಟಿದ್ದರೆ ಆ ಹುಡುಗರು ಈ ರೀತಿಯ ಘಟನೆಗೆ ಕಾರಣರಾಗುತ್ತಿರಲಿಲ್ಲ’ ಎಂಬುದು ಸ್ಥಳೀಯ ನಿವಾಸಿ ಶಾರುಖ್ ಅಭಿಪ್ರಾಯ.

‘ಶಿಕ್ಷಕಿಯ ಮನೆಗೆ ಕಲ್ಲು ಹೊಡೆದದ್ದು ಹಳೆಯ ಘಟನೆ. ಆದರೆ, ವಾರದ ಹಿಂದೆ ಪೊಲೀಸರನ್ನು ಕರೆಯಿಸಿ ಶಾಲೆಗೆ ಕಲ್ಲು ಎಸೆದಿದ್ದ ಹುಡುಗರನ್ನು ಶಿಕ್ಷಿಸಿದ್ದು ನಿಜ. ಅದೇ ಸಂಕೇತ್‌ ಮೇಲಿನ ಹಗೆತನಕ್ಕೆ ಕಾರಣ ಎಂಬುದು ಗೊತ್ತಿಲ್ಲ’ ಎಂದು ಮುಖ್ಯಶಿಕ್ಷಕ ಶಿವರಾಂ ಪ್ರತಿಕ್ರಿಯಿಸಿದರು.

‘ನಮ್ಮ ಏರಿಯಾದಲ್ಲಿ ಮೊದಲು ದಂಧೆಕೋರರು ಗಾಂಜಾ ಮಾರಾಟಕ್ಕೆ ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದರು. ಅವರು ಪೊಲೀಸರಿಗೆ ಸಿಕ್ಕಿಬಿದ್ದರೂ ಕೇಸ್‌ ಆಗುವುದಿಲ್ಲ. ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ ಎಂಬುದೇ ತಂತ್ರ. ಆದರೆ, ಈಗ ಅದೇ ಬಾಲಕರು ಗಾಂಜಾ ಸೇವಿಸಿ ಉಪಟಳ ಕೊಡುತ್ತಿದ್ದಾರೆ. ಓಣಿಯಲ್ಲಿ ಗುಂಪುಗುಂಪಾಗಿ ಬೈಕ್‌ಗಳಲ್ಲಿ ಸಂಚರಿಸುತ್ತಾ ಗಲಾಟೆ ಮಾಡುತ್ತ ಓಡಾಡುತ್ತಾರೆ. ಪ್ರಶ್ನಿಸಿದವರನ್ನು ಥಳಿಸುತ್ತಾರೆ. ಅದರ ಮುಂದುವರಿದ ಭಾಗವೇ ಸಂಕೇತ್‌  ಹತ್ಯೆ’ ಎಂದು ಸೂಳೆಬೈಲ್‌ ನಿವಾಸಿ ಗೋಪಿ ಹೇಳುತ್ತಾರೆ.

ಸಂಕೇತ
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಗಾಂಜಾ ಸೇವಿಸಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಧೀಶರ ಸೂಚನೆಯಂತೆ ಮೂತ್ರ ರಕ್ತದ ಜೊತೆಗೆ ಅವರ ಕೂದಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದು ವಾರದಲ್ಲಿ ವರದಿ ಬರಲಿದೆ.
ಬಿ.ನಿಖಿಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಮೊಗ್ಗ
ಅಮಲಲ್ಲಿರುತ್ತಾರೆ ಪ್ರಶ್ನಿಸಿದರೆ ಹೊಡೆಯುತ್ತಾರೆ.. 
‘ಊರಲ್ಲಿರುವ ಕೆಲವು ಮಕ್ಕಳಲ್ಲಿ ಗಾಂಜಾ ಪಂಕ್ಚರ್‌ ಹಾಕಲು ಬಳಸುವ ಸಲ್ಯೂಶನ್ ಸೇವಿಸುವ ಚಟ ವಿಪರೀತವಾಗಿದೆ. ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಮಾತು ಕೇಳುತ್ತಿಲ್ಲ. ಶಾಲೆ ಬಿಟ್ಟು ಅಲೆಯುತ್ತಾರೆ. ಕೆಲಸಕ್ಕೂ ಹೋಗುವುದಿಲ್ಲ. ಸದಾ ಅಮಲಿನಲ್ಲಿರುತ್ತಾರೆ. ಪ್ರಶ್ನೆ ಮಾಡಿದರೆ ನಮಗೇ ಹೊಡೆಯುತ್ತಾರೆ’ ಎಂದು ಊರಗಡೂರಿನ ಜಹೀರಾಬಿ ಅಳಲು ತೋಡಿಕೊಂಡರು. ‘ಓಣಿಯಲ್ಲಿ ಗಾಂಜಾ ಮಾರುವವರ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಸಂಜೆಯೇ ದೂರು ಕೊಟ್ಟವರ ಮನೆಗೆ ದಂಧೆಕೋರರ ಗುಂಪು ಮಚ್ಚು ಹಿಡಿದು ಬರುತ್ತದೆ. ಬೆದರಿಕೆ ಹಾಕಿ ಮನೆ ಎದುರು ನಿಲ್ಲಿಸಿದ ವಾಹನದ ಗಾಜು ಒಡೆದು ಹಾಕುತ್ತಾರೆ. ದೂರು ಕೊಟ್ಟವರ ಮಾಹಿತಿಯನ್ನು ಪೊಲೀಸರೇ ಅವರಿಗೆ ಕೊಡುತ್ತಾರೆ. ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳುವುದು?’ ಎಂದು ಆಕೆ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.