
ತುಮರಿ: ಸಮೀಪದ ಸಿಗಂದೂರಿನಲ್ಲಿರುವ ಚೌಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಸಿಗಂದೂರು ಯಾತ್ರಿ ನಿವಾಸ’ ಉದ್ಘಾಟನೆ ಆಗದೇ, ಯಾತ್ರಿಗಳ ಬಳಕೆಗೂ ಸಿಗದೇ ಹಾಳುಬಿದ್ದಿದೆ.
ಪ್ರವಾಸೋದ್ಯಮ ಇಲಾಖೆಯ ಅನುದಾನದೊಂದಿಗೆ 2018ರಲ್ಲಿ ಸಿಗಂದೂರು ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿತಿ ಕೇಂದ್ರದಿಂದ ಕಟ್ಟಡವನ್ನು ನಿರ್ಮಿಸಲಾಗಿದೆ.
ಅಲ್ಲಿ ಭಕ್ತರಿಗೆ ತಂಗಲು ಕೊಠಡಿಗಳು, ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡ ತಲೆ ಎತ್ತಿ ನಿಂತಿದ್ದರೂ ಲೋಕಾರ್ಪಣೆಯಾಗಲು ಅರಣ್ಯ ಇಲಾಖೆಯ ವನ್ಯಜೀವಿ ವಲಯ ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಕಟ್ಟಡ ನಿರ್ಮಾಣವಾಗಿರುವ ಕಳಸವಳ್ಳಿ ಗ್ರಾಮದ ಭೂಮಿಯು ಮಂಜೂರಾತಿಗೂ ಮುನ್ನ ಸೊಪ್ಪಿನ ಬೆಟ್ಟದ ಭೂಮಿಯಾಗಿದ್ದು, ಈ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿದ್ದ ಎರಡು ಎಕರೆ ಭೂಮಿಯನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಆದರೆ, ಆ ಜಾಗ ಶರಾವತಿ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಕಾರಣ ಜಿಲ್ಲಾಧಿಕಾರಿ ನಂತರ ಮಂಜೂರಾತಿ ರದ್ದು ಮಾಡಿದ್ದರು.
ಸಿಗಂದೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅಂದಿನ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಯಾತ್ರಿ ನಿವಾಸ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಭೂ ಮಂಜೂರಾತಿ ಸಹ ಮಾಡಿದ್ದರು.
‘ಕಟ್ಟಡ ನಿರ್ಮಾಣದ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಇದ್ದ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಟ್ಟಡ ಪೂರ್ಣಗೊಂಡ ಬಳಿಕ ತಕರಾರು ತೆಗೆದಿರುವುದು ಏಕೆ? ಆ ವೇಳೆ ಸ್ಥಳ ಪರಿಶೀಲನೆ ನಡೆಸಿರಲಿಲ್ಲವೇ?’ ಎಂಬುದು ಗ್ರಾಮಸ್ಥರ ಪ್ರಶ್ನೆ.
ಪರ್ಯಾಯವೇ ಪರಿಹಾರ: ‘ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ತಕರಾರು ವಿರುದ್ಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶದ ಜೊತೆಗೆ ಅರಣ್ಯ ಹಕ್ಕು ‘ನಮೂನೆ ಬಿ’ಯಲ್ಲಿ ಭೂಮಿ ಮಂಜೂರಾತಿಗೆ ಅವಕಾಶವಿದೆ. ಈಗಿರುವ ಜಾಗಕ್ಕೆ ಪರ್ಯಾಯ ಭೂಮಿಯನ್ನು ಬೇರೆ ಭಾಗದಲ್ಲಿ ನೀಡಿದರೆ ಯಾತ್ರಿ ನಿವಾಸ ಉಳಿಸಿಕೊಳ್ಳಲು ಅವಕಾಶವಿದೆ. ಆದರೆ, ಇದಕ್ಕೆ ಶಿವಮೊಗ್ಗ ಜಿಲ್ಲಾಡಳಿತದೊಂದಿಗೆ ಸಮನ್ವಯದ ಅಗತ್ಯವಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ನಿರ್ಮಿತಿ ಕೇಂದ್ರ ನಿರ್ಮಿಸಿರುವ ಕಟ್ಟಡ ಇದುವರೆಗೂ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡಿದರೆ ಮಾತ್ರ ಯಾತ್ರಿ ನಿವಾಸ ಯಾತ್ರಿಗಳ ಬಳಕೆಗೆ ಮುಕ್ತಗೊಳ್ಳಲಿದೆ. ಅನುಮತಿಯ ನಿರ್ಧಾರದ ಮೇಲೆ ಕಟ್ಟಡದ ಭವಿಷ್ಯ ನಿಂತಿದೆ-ಧರ್ಮಪ್ಪ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಯಾತ್ರಿಗಳ ಬಳಕೆ ಉದ್ದೇಶದ ಕಟ್ಟಡಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಕಟ್ಟಡವನ್ನು ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು-ದಿನೇಶ್ ಶಿರವಾಳ, ಸ್ಥಳೀಯರು
ವನ್ಯಜೀವಿ ವಲಯದಲ್ಲಿ ಅನುಮತಿ ಪಡೆಯದೇ ಯಾತ್ರಿ ನಿವಾಸ ಕಟ್ಟಿದ್ದರು. ಹೀಗಾಗಿ ಪ್ರಕರಣ ದಾಖಲಿಸಿದ್ದೆವು. ಪರ್ಯಾಯ ಭೂಮಿ ತೋರಿಸಿ ಯಾತ್ರಿ ನಿವಾಸಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ-ಪ್ರಸನ್ನಕೃಷ್ಣ ಪಟಗಾರ, ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.