ಶಿವಮೊಗ್ಗ: ಮಲೆನಾಡಿನ ಜನರ ಬದುಕು ಕೃಷಿಯಲ್ಲಿದೆ. ಆದರೆ, ರಾಸಾಯನಿಕ ರಸಗೊಬ್ಬರದ ಅತಿಯಾದ ಬಳಕೆಯಿಂದ ಕೃಷಿ ಭೂಮಿಗೆ ಬೇಕಾದ ಪೂರಕ ಫಲವತ್ತತೆ ಕ್ರಮೇಣ ಕ್ಷೀಣಿಸುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ 30 ರಿಂದ 40 ಕ್ವಿಂಟಲ್ ಇಳುವರಿ ಪಡೆಯುತ್ತಿದ್ದ ರೈತರು ಮಣ್ಣಿನಲ್ಲಿ ಪೋಶಕಾಂಶಗಳ ಕೊರತೆಯಿಂದ ಇಳುವರಿ ಕುಸಿದಿದೆ.
ಮಣ್ಣಿನಲ್ಲಿ ಪ್ರಮುಖವಾಗಿ ಸಾವಯವ ಅಂಶ ಕಡಿಮೆಯಾಗುತ್ತಿರುವುದರಿಂದ ಬೆಳೆಗಳ ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾವಯವ ಗೊಬ್ಬರ ಬಳಕೆ ಹೆಚ್ಚಿಲ್ಲದ ಕಾರಣ ಮಣ್ಣಿನಲ್ಲಿ ನೆಟ್ರೋಜನ್-ಪೊಟ್ಯಾಷ್ ಅಂಶ ಕಡಿಮೆ ಆಗುತ್ತಿದ್ದು, ರೋಗಬಾಧೆ ಹೆಚ್ಚಾಗಿ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.
ಭತ್ತ ಬೆಳೆಯುತ್ತಿದ್ದ ರೈತ ಅಡಿಕೆ ಹಾಗೂ ಶುಂಠಿಗೆ ಹೆಚ್ಚು ಒತ್ತು ನೀಡಿದ್ದಾನೆ. ಭತ್ತದ ಹೊಲಕ್ಕೆ ಸುರಿಯುತ್ತಿದ್ದ ಕೊಟ್ಟಿಗೆ ಗೊಬ್ಬರವನ್ನು ಈ ಬೆಳೆಗಳು ಆಕ್ರಮಿಸಿಕೊಂಡಿವೆ. ಜೋಳಕ್ಕೆ ಬಾಧಿಸುವ ರೋಗ ಹತೋಟಿಗೆ ವ್ಯಾಪಕವಾದ ಔಷಧ ಸಿಂಪಡಣೆ, ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಸಾಂಪ್ರದಾಯಕ ಬೆಳೆಗಳಿಗೂ ಒತ್ತು ನೀಡಿ ಸಾವಯವ ಕೃಷಿ ಪದ್ಧತಿ ರೂಢಿಸಿಕೊಳ್ಳಬೇಕಿದೆ.
ಮಣ್ಣಿನ ಫಲವತ್ತತೆ ಕಡಿಮೆಯಾಗಲು ರಾಸಾಯನಿಕ ಗೊಬ್ಬರಗಳ ಬಳಕೆ ಒಂದೇ ಕಾರಣ ಅಲ್ಲ. ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುವುದನ್ನು ನಿಲ್ಲಿಸಿದ್ದಾರೆ. ಸರಿಯಾಗಿ ಮಣ್ಣು ಪರೀಕ್ಷೆ ಮಾಡಿಸದೇ ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ನೀಡುವ ಸಲಹೆಗಳನ್ನು ರೈತರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಎಲ್ಲ ಅಂಶಗಳು ಭೂಮಿಯ ಫಲವತ್ತತೆ ಹಾಳಾಗಲು ಕಾರಣವಾಗಿವೆ ಎಂದು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಬಿ.ಸಿ.ಧನಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಬಳಸುತ್ತಿಲ್ಲ ಎಂದರು.
ರೈತರು ಸಮತೋಲಿತ ರಸಗೊಬ್ಬರ ಬಳಕೆ ಮಾಡದ ಪರಿಣಾಮವಾಗಿ ಮಣ್ಣಿಗೆ ಪೋಷಕಾಂಶಗಳ ಕೊರತೆ ಉಂಟಾಗುತ್ತಿದೆ. ಶುಂಠಿ, ಮೆಕ್ಕೆಜೋಳಕ್ಕೆ ಹೆಚ್ಚುತ್ತಿರುವ ರೋಗಬಾಧೆ ಅವಲೋಕಿಸಿದಾಗ, ನೈಟ್ರೋಜನ್-ಪೊಟ್ಯಾಷ್ ಪೋಷಕಾಂಶಗಳ ಕೊರತೆ ಇರುವುದು ಮಣ್ಣು ಪರೀಕ್ಷೆಗಳ ಮೂಲಕ ತಿಳಿದಿದೆ ಎಂದು ಕೃಷಿ ಅಧಿಕಾರಿ ಡಿ.ಪಿ.ರವಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.