ADVERTISEMENT

ಸೊರಬ: ಅಯ್ಯಪ್ಪ‌ ಮಾಲಾಧಾರಿಗಳಿಂದ ಶ್ರಮದಾನ

ಪ್ರತಿ ವರ್ಷವೂ ಅಭಿವೃದ್ಧಿ ಕಾರ್ಯಕ್ಕೆ ಮೀಸಲು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:21 IST
Last Updated 2 ಜನವರಿ 2026, 5:21 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮಾಲಾಧಾರಿಗಳಿಂದ ಸನ್ನಿಧಿಯ ಮುಂಭಾಗದ ನಾಗದೇವರ ಕಟ್ಟೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಯಿತು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮಾಲಾಧಾರಿಗಳಿಂದ ಸನ್ನಿಧಿಯ ಮುಂಭಾಗದ ನಾಗದೇವರ ಕಟ್ಟೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಯಿತು   

ಸೊರಬ: ಭಕ್ತಿ ಎಂದರೆ ಕೇವಲ ಪೂಜೆ ಪುನಸ್ಕಾರಗಳಷ್ಟೇ ಅಲ್ಲ, ಅದು ಸೇವೆಯೂ ಹೌದು ಎಂಬುದನ್ನು ತಾಲ್ಲೂಕಿನ ಚಂದ್ರಗುತ್ತಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಾಬೀತುಪಡಿಸುತ್ತಿದ್ದಾರೆ.

ಚಂದ್ರಗುತ್ತಿ ಗ್ರಾಮದ ರಥ ಬೀದಿಯಲ್ಲಿನ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮಾಲಾಧಾರಿಗಳು ಶ್ರಮದಾನದ ಮೂಲಕ ದೇವಸ್ಥಾನದ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಸನ್ನಿಧಾನದ ಮುಂಭಾಗದಲ್ಲಿನ ನಾಗದೇವರ ಕಟ್ಟೆಯ ಸುತ್ತಲೂ ಈಗ ಸುಸಜ್ಜಿತವಾದ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಮಾಲಾಧಾರಿಗಳೇ ಶ್ರಮವಹಿಸಿ ಈ ಕೆಲಸವನ್ನು ಪೂರೈಸಿದ್ದಾರೆ. ಇದರಿಂದ ಹಬ್ಬಕ್ಕೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಕಾಂಪೌಂಡ್ ನಿರ್ಮಾಣದಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ ಜೊತೆಗೆ ದೇವಸ್ಥಾನದ ಅಂದವೂ ಹೆಚ್ಚಿದೆ.

ADVERTISEMENT

ಈ ಭಾಗದ ಮಾಲಾಧಾರಿಗಳು ಪ್ರತಿ ವರ್ಷವೂ ಶ್ರದ್ಧಾಭಕ್ತಿಯಿಂದ ದೇವಸ್ಥಾನದ ಒಂದಲ್ಲಾ ಒಂದು ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳ ನಡುವೆಯೂ ಸನ್ನಿಧಾನದ ಅಭಿವೃದ್ಧಿಗಾಗಿ ಸಮಯ ಮೀಸಲಿಟ್ಟು ಕಟ್ಟಡದ ದುರಸ್ತಿ, ಬಣ್ಣ ಬಳಿಯುವುದು ಮತ್ತು ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

‘ಸನ್ನಿಧಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ನಾವೆಲ್ಲರೂ ಸೇರಿ ಈ ಒಂದು ಸಣ್ಣ ಯತ್ನವನ್ನು ಮಾಡಿದ್ದೇವೆ. ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು’ ಎಂಬುದು ಮಾಲಾಧಾರಿಗಳ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.