
ಶಿವಮೊಗ್ಗ : ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯಾವಶ್ಯಕ. ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾಮಠದ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ನಗರದ ಗುರುಪುರದ ಬಿಜಿಎಸ್ ಗುರುಕುಲ ಶಾಲೆಯ ಸಭಾಂಗಣದಲ್ಲಿ ಪ್ರೌಢ ಶಾಲೆಯ ವಿಭಾಗದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು
ಪರೀಕ್ಷೆಯ ಅಂಕಗಳಿಕೆಯೇ ಜೀವನವಲ್ಲ, ವ್ಯಾಸಂಗದ ಮೂಲಕ ಬದುಕಿನ ಪ್ರತಿ ಗಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಳೆಯಬೇಕು. ಮೊದಲು ನಮಗೆ ನಾವು ಬೆಳಕಾಗಬೇಕು, ನಮ್ಮ ಬದುಕು ಬೆಳಗುತ್ತಿದ್ದರೆ, ಬೇರೆಯವರಿಗೆ ಬೆಳಕು ಸಿಗುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೇ ರೀತಿಯ ಗ್ರಹಿಕ ಶಕ್ತಿ ಹಾಗೂ ಸಾಮರ್ಥ್ಯ ಇರಲು ಸಾಧ್ಯವಿಲ್ಲ.ಹಾಗಾಗಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಖ್ಯಾತ ಮನೋವೈದ್ಯರು ಹಾಗೂ ಕೌನ್ಸೆಲರ್ ಆಗಿರುವ ಡಾ. ಐಶ್ವರ್ಯ ವಿ .ಎಚ್. ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ,ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳೆಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. ೧೦ ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮರುಕಳಿಸಬೇಕು.ನಿಮ್ಮ ಜೀವನದಲ್ಲಿ ನಿಮಗೆ ತಂದೆ-ತಾಯಿಗಳೇ ಶಕ್ತಿ ಮತ್ತು ಆಸರೆ ಹಾಗಾಗಿ ನಿಮ್ಮ ಈ ಒಂದು ಎರಡು ವರ್ಷ ಮೊಬೈಲ್,ರೀಲ್ಸ್, ಫೇಸ್ಬುಕ್,ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದರೆ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದು ಒಂದು ಕಲೆ, ಯಾವುದೋ ಒಂದು ಪರೀಕ್ಷೆಯಲ್ಲಿ ಮಗು ಶೂನ್ಯ ಅಂಕವನ್ನು ಪಡೆಯಿತು ಎಂದರೆ ಅದರ ಭವಿಷ್ಯವೇ ಮುಗಿದಂತೆ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಕರು ಮಗುವನ್ನು ಹುರಿದುಂಬಿಸುವಂತಹ ಕಾರ್ಯವನ್ನು ಮಾಡಬೇಕು.ಪ್ರತಿಯೊಂದು ಮಗುವಿನಲ್ಲಿಯೂ ಕೂಡ ಅದರದ್ದೇ ಆದ ಜ್ಞಾನ ಮಟ್ಟವಿರುತ್ತದೆ. ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ನಿಮ್ಮದಾಗಿರುತ್ತದೆ ಎಂದು ಶಿಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.