ADVERTISEMENT

ಆನವಟ್ಟಿ: ಬಸ್‌ಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ

ಪಾಸ್‌ ಇಲ್ಲದೇ ಹಣ ತೆತ್ತು ಸಂಚರಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು

ರವಿ.ಆರ್ ತಿಮ್ಮಾಪುರ
Published 30 ನವೆಂಬರ್ 2021, 4:32 IST
Last Updated 30 ನವೆಂಬರ್ 2021, 4:32 IST
ಆನವಟ್ಟಿಯಿಂದ 7 ಕೀ.ಮೀ.ದೂರದ ಹದಗೆಟ್ಟ ಚೌಟಿ ರಸ್ತೆಯಿಂದ ಕಾಲೇಜಿಗೆ ಬರುತ್ತಿರುವ ವಿದ್ಯಾಥಿರ್ಗಳು.
ಆನವಟ್ಟಿಯಿಂದ 7 ಕೀ.ಮೀ.ದೂರದ ಹದಗೆಟ್ಟ ಚೌಟಿ ರಸ್ತೆಯಿಂದ ಕಾಲೇಜಿಗೆ ಬರುತ್ತಿರುವ ವಿದ್ಯಾಥಿರ್ಗಳು.   

ಆನವಟ್ಟಿ: ಇಲ್ಲಿನ ಕೆಪಿಎಸ್, ಪದವಿ, ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಗಳಿಗೆ ಸುತ್ತಲ ನೂರಾರು ಗ್ರಾಮಗಳಿಂದ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು. ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು 5ರಿಂದ 8 ಕಿ.ಮೀ ನಡೆದುಕೊಂಡು ಹೋಗಬೇಕಿದೆ.

ಕೆಲವು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳು, ಆಟೊ, ಅಮ್ನಿಗಳಲ್ಲಿ ಸಂಚರಿಸುತ್ತಿದ್ದಾರೆ. ಕೊರೊನಾ ಮೊದಲ ಅಲೆಗಿಂತ ಮೊದಲು ಇದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ಶಾಲೆಗಳು ಪ್ರಾರಂಭವಾದರೂ ಸಾಗರ, ಶಿಕಾರಿಪುರ, ಹಿರೇಕೆರೂರು, ಶಿವಮೊಗ್ಗ, ಹಾನಗಲ್ ಡಿಪೊಗಳು ಬಸ್‌ಗಳನ್ನು ಪ್ರಾರಂಭಿಸಿಲ್ಲ. ವಿದ್ಯಾರ್ಥಿಗಳು ಬಸ್ ಪಾಸ್‌ಗಳನ್ನು ಪಡೆಯದಂತಾಗಿದೆ. ಇದರಿಂದಾಗಿ ಹೆಚ್ಚಿನ ಹಣಕೊಟ್ಟು ಶಾಲೆಗೆ ಬರುವ ಪರಿಸ್ಥಿತಿ ಇದೆ.

‘ಬೆಳಿಗ್ಗೆ ಸಿಕ್ಕಸಿಕ್ಕ ವಾಹನಗಳಲ್ಲಿ ಶಾಲಾ–ಕಾಲೇಜುಗಳಿಗೆ ಬರುತ್ತೇವೆ. ಆದರೆ ಶಾಲೆ ಬಿಟ್ಟ ಬಳಿಕ ಗ್ರಾಮಕ್ಕೆ ತೆರಳಲು ಬಸ್‌ಗಳು ಇಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನಕ್ಕೆ ತರಗತಿಗಳು ಮಗಿಯುತ್ತವೆ. ಬಸ್‌ ಅಥವಾ ಬೇರೆ ವಾಹನಗಳಿಗಾಗಿ ಗಂಟೆಗಟ್ಟಲೆ ಕಾಯಬೇಕು’ ಎಂಬುದು ಹಿರೇಇಡಗೊಡಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಂಗಳ.ಎಂ. ಅಭಿಪ್ರಾಯ.

ADVERTISEMENT

‘ಚಿಕ್ಕಇಡಗೊಡು, ವೃತ್ತಿಕೊಪ್ಪ, ತೆವರೆತೆಪ್ಪ, ಕುಣೆತೆಪ್ಪ,ಚೌಟಿ, ಚಿಕ್ಕ ಚೌಟಿ, ಹಂಚಿ, ಹಿರೇಮಾಗಡಿ, ತತ್ತೂರು, ಭಾರಂಗಿ, ಬೆಲವಂತನಕೊಪ್ಪ, ಎಣ್ಣೆಕೊಪ್ಪ, ಹಿರೇಇಡಗೊಡು, ಕಾತುವಳ್ಳಿ, ಕೆರೆಹಳ್ಳಿ, ಕಾತುವಳ್ಳಿ, ಮಲ್ಲಾಪುರ, ಮೂಗುರು, ದ್ವಾರಳ್ಳಿ, ತೊರವಂದ, ನೆಲ್ಲಿಕೊಪ್ಪ, ಮೂಡಿ ಸೇರಿ ಅನೇಕ ಗ್ರಾಮಗಳಲ್ಲಿ ಬಸ್‌ಗಳು ಬರುವುದೇ ಇಲ್ಲ. ಕೆಲವೊಮ್ಮೆ ಆಟೊಗಳು ಸಿಗುವುದಿಲ್ಲ. ಕೆಲವೊಮ್ಮೆ ಬೆಳಿಗ್ಗೆ ತಿಂಡಿ ತಿನ್ನದೇ ಒಮ್ಮೊಮ್ಮೆ ಕಾಲೇಜಿಗೆ ಬರಬೇಕಾಗುತ್ತದೆ’ ಎನ್ನುತ್ತಾರೆ ಶಾಲೆಯ ವಿದ್ಯಾರ್ಥಿಗಳು.

‘ರಾತ್ರಿ 6.30ರ ಬಳಿಕ ಸೊರಬ, ಹಾನಗಲ್ ಮಾರ್ಗಗಳಲ್ಲಿ ಬಸ್ಸುಗಳು ಇಲ್ಲ. ರಾತ್ರಿ 8ರ ಬಳಿಕ ಈ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಬಿಡಬೇಕು. ಶಿವಮೊಗ್ಗ-ಹುಬ್ಬಳ್ಳಿಗೆ ಹೋಗುವ ಮಧ್ಯಾಹ್ನ ಹಾಗೂ ಸಂಜೆಯ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ತಾಲ್ಲೂಕಿನ ಗ್ರಾಮಸ್ಥರಿಗೂ ಇದರಿಂದ ತೊಂದರೆಯಾಗಿದೆ. ಕೂಡಲೇ ಕೆಎಸ್‌ಆರ್‌ಆರ್‌ಟಿಸಿ ಬಸ್‌ಗಳನ್ನು ಆರಂಭಿಸಬೇಕು’ ಎಂದು ಗ್ರಾಮದ ಸುರೇಶ್ ಮಸಾಲ್ತಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.