ADVERTISEMENT

ಹೊಸನಗರ | ಸುಮೇಧಾ ಸಹಕಾರಿ ಸಂಘ: ₹ 28 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:09 IST
Last Updated 27 ಆಗಸ್ಟ್ 2024, 16:09 IST
ಹೊಸನಗರದಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಆರ್.ಪ್ರದೀಪ್ ಮಾಹಿತಿ ನೀಡಿದರು
ಹೊಸನಗರದಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಆರ್.ಪ್ರದೀಪ್ ಮಾಹಿತಿ ನೀಡಿದರು    

ಹೊಸನಗರ: ‘2023– 24ನೇ ಸಾಲಿನ ವಾರ್ಷಿಕ ವಹಿವಾಟು ಅಂತ್ಯಕ್ಕೆ ಸಂಘ ₹ 28.39 ಲಕ್ಷ ನಿವ್ವಳ ಲಾಭಗಳಿಸಿದ್ದು, ತನ್ನ ಷೇರುದಾರರಿಗೆ ಶೇ 10ರಷ್ಟು ಲಾಭಾಂಶ ನೀಡಿದೆ’ ಎಂದು ಸುಮೇಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್. ಪ್ರದೀಪ್ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಮಂಗಳವಾರ ನಡೆದ ಸಂಘದ 12ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಹಕಾರಿ ಹೆಸರಿನಲ್ಲಿ ಈಗಾಗಲೇ ನೂತನ ಗೋದಾಮು ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ರೈತರು ಸಂಘದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ವಿನಂತಿಸಿದರು.

ADVERTISEMENT

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್ ಮಾತನಾಡಿ, ‘ಸಂಘವು ಪ್ರಗತಿ ಪಥದಲ್ಲಿದೆ. ಸದಸ್ಯರ ಸಲಹೆ, ಸಹಕಾರ ಅತ್ಯಗತ್ಯವಾಗಿದೆ. ಸಹಕಾರಿ ಸಂಸ್ಥೆಗಳು ನಾಲ್ಕು ಕಾಲಿನ ಮಂಚವಿದ್ದಂತೆ. ಸಾಲಗಾರರು, ಠೇವಣಿದಾರರು, ಸದಸ್ಯರು, ಸಿಬ್ಬಂದಿ ಎಂಬ ನಾಲ್ಕು ವಿಭಾಗಗಳನ್ನು ಸರಿ ರೀತಿಯಲ್ಲಿ ಸಮತೋಲನದ ಮೂಲಕ ಸರಿದೂಗಿಸುವ ಹೊಣೆ ಆಡಳಿತ ಮಂಡಳಿ ಮೇಲಿದೆ’ ಎಂದು ಹೇಳಿದರು.

ಉಪಾಧ್ಯಕ್ಷ ವಿ.ಅನಂತ ಮೂರ್ತಿ ಮಾತನಾಡಿ, ‘ಸಂಸ್ಥೆಯು ತಾಲ್ಲೂಕು ಎಪಿಎಂಸಿ ವಹಿವಾಟಿನಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೆ, ಇತ್ತೀಚಿಗೆ ಕೃಷಿಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತಾಪಿ ವರ್ಗಕ್ಕೆ ಮಾರಕ ಎಂಬಂತೆ ಕಂಡುಬರುತ್ತಿದೆ. ಇದಕ್ಕೆ ಅಡಿಕೆ ಬೆಳೆಗಾರರು ಹೊರತಾಗಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಸಿಇಒ ಪ್ರಕಾಶ್ ನಡಾವಳಿ ಪತ್ರ ಓದಿದರು. ಮಹಾಸಭೆಯ ಅನುಮತಿ ಮೇರೆಗೆ ಹಾಜರಾತಿ ದಾಖಲಿಸಿ, ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಸಭೆಯ ಒಪ್ಪಿಗೆ ಪಡೆಯಲಾಯಿತು.

ಹಿರಿಯ ಲೆಕ್ಕಪರಿಶೋಧಕ ರವೀಂದ್ರನಾಥ್ ಸಭೆ ಉದ್ಘಾಟಿಸಿದರು.

ನಿರ್ದೇಶಕರಾದ ಮೂಡಬಾಗಿಲು ರಮಾನಂದ, ವಿನಾಯಕ ಹೆದ್ಲಿ, ಎಸ್.ಪಿ. ಸುರೇಶ್, ಕಣಿವೆಬಾಗಿಲು ಸುಬ್ರಹ್ಮಣ್ಯ, ಕೋಡೂರು ಸುಬ್ರಹ್ಮಣ್ಯ ಭಟ್, ಅರವಿಂದ, ಅನಂತ ಪದ್ಮನಾಭ ಬಾಯಿರಿ, ಸುಜಾತ ಉಡುಪ, ಜ್ಯೋತಿ ಹರಿಕೃಷ್ಣ ಸಿಬ್ಬಂದಿಗಳಾದ ಮಧುಕರ್, ಸುಮಂತ್, ಮಹೇಶ್, ನಾಗಲಿಂಗೇಶ್, ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶ್ರೀಲಕ್ಷ್ಮಿ ಪ್ರಾರ್ಥಿಸಿದರು.

ಶಾಖಾ ವ್ಯವಸ್ಥಾಪಕ ಸುನೀಲ್ ಹಳೆತೋಟ ಸ್ವಾಗತಿಸಿದರು, ನಿರ್ದೇಶಕ ಬಿ.ಪಿ.ಉಮೇಶ್ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.