ADVERTISEMENT

ಜೋಶಿ ಅಮಾನತು ಮಾಡಿ, ಆಡಳಿತಾಧಿಕಾರಿ ನೇಮಿಸಿ: ಕಸಾಪ ಅಧ್ಯಕ್ಷರ ವಿರುದ್ಧ ನಿರ್ಣಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:31 IST
Last Updated 7 ಜೂನ್ 2025, 14:31 IST
<div class="paragraphs"><p>ಶಿವಮೊಗ್ಗದಲ್ಲಿ ಶನಿವಾರ ಕನ್ನಡ ನಾಡು–ನುಡಿ ಜಾಗೃತಿ ಸಮಿತಿಯಿಂದ ನಡೆದ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಿದರು. ಸಮ್ಮೇಳನದ ಸಂಚಾಲಕರಾದ ಚಂದ್ರಶೇಖರ ಹೊನ್ನಾಳಿ ಉಪಸ್ಥಿತರಿದ್ದರು</p></div>

ಶಿವಮೊಗ್ಗದಲ್ಲಿ ಶನಿವಾರ ಕನ್ನಡ ನಾಡು–ನುಡಿ ಜಾಗೃತಿ ಸಮಿತಿಯಿಂದ ನಡೆದ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಿದರು. ಸಮ್ಮೇಳನದ ಸಂಚಾಲಕರಾದ ಚಂದ್ರಶೇಖರ ಹೊನ್ನಾಳಿ ಉಪಸ್ಥಿತರಿದ್ದರು

   

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷ ಮಹೇಶ್ ಜೋಶಿ ಆರ್ಥಿಕ ದುರ್ವ್ಯವಹಾರ ನಡೆಸಿದ್ದು, ಆ ಕುರಿತ ತನಿಖೆಗೆ ಆಯೋಗ ರಚಿಸಬೇಕು. ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಶನಿವಾರ ಇಲ್ಲಿ ಕನ್ನಡ ನಾಡು– ನುಡಿ ಜಾಗೃತಿ ಸಮಿತಿಯಿಂದ ನಡೆದ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ನಿರ್ಣಯಿಸಲಾಯಿತು.

‘ಕನ್ನಡ ಸಾಹಿತ್ಯ ಪರಿಷತ್ ಉಳಿಸಿ’ ಹೋರಾಟದ ಅಂಗವಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ, ‘ನಮ್ಮ ಯಾವುದೇ ಆಕ್ಷೇಪಣೆಗಳಿಗೂ ಮಹೇಶ್ ಜೋಶಿ ಈವರೆಗೂ ಉತ್ತರಿಸಿಲ್ಲ. ಬದಲಿಗೆ ನಾಡಿನ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದ ಎಡಪಂಥೀಯರು ತನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಾವು ಎಡಪಂಥೀಯರೂ ಅಲ್ಲ, ಬಲಪಂಥೀಯರೂ ಅಲ್ಲ. ಬದಲಿಗೆ ನೇರಪಂಥೀಯರು ಎಂದರು.

ADVERTISEMENT

ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಸಾಹಿತ್ಯ ಪರಿಷತ್‌ನಲ್ಲಿ 10 ವರ್ಷಗಳಿಂದ ಕೈಗೊಂಡ ಎಲ್ಲಾ ಬೈಲಾ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಆಜೀವ ಸದಸ್ಯರಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಕೊಡುವ ಅನುದಾನ ₹5 ಕೋಟಿಗೆ ಸೀಮಿತಗೊಳಿಸಿ ಉಳಿದ ಹಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡಬೇಕು. ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳಿಗೆ ಸರ್ಕಾರವೇ ನೇರವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. 

ಸಾಹಿತ್ಯಿಕ ಮನಸ್ಸು ಇರುವವರು ಯಾರೂ ಸರ್ವಾಧಿಕಾರಿ ಆಗಲು ಸಾಧ್ಯವಿಲ್ಲ. ಆದರೆ, ಪಕ್ಷ ರಾಜಕಾರಣದ ಕೊಳಕನ್ನು ಸಾಹಿತ್ಯ ಪರಿಷತ್‌ಗೆ ಅಂಟಿಸಿದ ವ್ಯಕ್ತಿಯಿಂದ ಎಂದೂ ಬಾರದ ದುಷ್ಕಾಲ ಈಗ ಬಂದಿದೆ. ಅದಕ್ಕೆ ಕಡಿವಾಣ ಹಾಕಲು ಇದು ಗಾಂಧಿ ಮಾರ್ಗದ ಹೊರಾಟ.
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಸಾಹಿತ್ಯ ಪರಿಷತ್ತು ಮಹೇಶ ಜೋಶಿಯವರ ಖಾಸಗಿ ಕಂಪೆನಿ ಅಲ್ಲ. ಬದಲಿಗೆ ಕನ್ನಡಿಗರ ಮಾಲೀಕತ್ವದ ಸಂಸ್ಥೆ. ಬೈಲಾ ತಿದ್ದುಪಡಿ ಮೂಲಕ ಜೋಶಿ ಅದರ ಆತ್ಮಗೌರವ ತಿರುಚಲು ಹೊರಟಿದ್ದಾರೆ. ಈ ಹೋರಾಟದಲ್ಲಿ ಕನ್ನಡಿಗರು, ಕನ್ನಡ ಸಾಹಿತ್ಯದ ಹಿತಾಸಕ್ತಿ ಅಡಗಿದೆ.
-ಬಂಜಗೆರೆ ಜಯಪ್ರಕಾಶ್, ಹಿರಿಯ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.